ಮಂಗಳೂರು: ಡಬಲ್ ಇಂಜಿನ್ ಸರಕಾರದ ಫ್ಯುಯೆಲ್ ಕಮ್ಯುನಲ್, ಸೈಲೆನ್ಸ್ ಹೊಗೆಯಲ್ಲಿ ವಿಷ; ಖಾದರ್ ಟೀಕೆ
Wednesday, January 4, 2023
ಮಂಗಳೂರು: ಬಿಜೆಪಿಯ ಡಬಲ್ ಇಂಜಿನ್ ಸರಕಾರದಲ್ಲಿ ಬರೀ ಕಮ್ಯುನಲ್ ಫ್ಯುಯೆಲ್ ತುಂಬಿಕೊಂಡಿದೆ. ಸೈಲೆನ್ಸರ್ ನ ಹೊಗೆಯಲ್ಲಿ ಬರೀ ವಿಷವೇ ತುಂಬಿಕೊಂಡಿದೆ. ಇಂಜಿನ್ ಮತ್ತು ಬಾಡಿಯಲ್ಲಿ ಜನಸಾಮಾನ್ಯರ ರಕ್ತ ತುಂಬಿಕೊಂಡಿದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು ಟಿ ಖಾದರ್ ಕಟುವಾಗಿ ಟೀಕಿಸಿದ್ದಾರೆ.
ರಸ್ತೆ, ಗುಂಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತಾಡದಿರಿ, ಬರೀ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಕರೆಗೆ ಟಾಂಗ್ ನೀಡಿದ ಖಾದರ್, ಈ ಡಬಲ್ ಇಂಜಿನ್ ಸರಕಾರಕ್ಕೆ ಈಗ ಕಾಲ ಬಂದಿದೆ. ಆದ್ದರಿಂದ ಇವರ ಇಂಜಿನ್ ಅನ್ನು ದೇಶದ ಜನರೇ ಗುಜರಿಗೆ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ರಸ್ತೆಯನ್ನು ಅಭಿವೃದ್ಧಿ ಮಾಡಿ, ಗುಂಡಿ ಮುಚ್ಚುವ ಕೆಲಸ ಮಾಡುವ ಅರ್ಹತೆ ಮತ್ತು ಯೋಗ್ಯತೆ ಬಿಜೆಪಿ ಸರಕಾರಕ್ಕಿಲ್ಲ. ಇಷ್ಟು ವರ್ಷದಲ್ಲಿ ಈ ಸರಕಾರ ಅಭಿವೃದ್ಧಿ ಕೆಲಸ ಮಾಡಿಲ್ಲ. ಕುಚ್ಚಲಕ್ಕಿ ತರಲು ಸಿಎಂಗೆ ಮನವಿ ಕೊಟ್ಟದ್ದಷ್ಟೇ ಆದರೆ ಈವರೆಗೆ ಇವರಿಗೆ ಕುಚ್ಚಲಕ್ಕಿ ತರುವ ಯೋಗ್ಯತೆ ಇಲ್ಲ. ರೇಶನ್ ಕಾರ್ಡ್ ಕೊಡುವ ಯೋಗ್ಯತೆ ಇಲ್ಲ. ಆದರೆ ಚುನಾವಣೆ ಹತ್ತಿರ ಬರುವ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಜನರಿಗೆ ಇದೀಗ ಅರ್ಥವಾಗಿದೆ ಎಂದರು.
ಗೋವುಗಳ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಗೋಸೇವೆಯ ಹೆಸರಲ್ಲಿ ಲೂಟಿ ಮಾಡುತ್ತಿದೆ. ಪಶುವೈದ್ಯಾಲಯದ ಆ್ಯಂಬುಲೆನ್ಸ್ ಗೆ ಇನ್ನೂ ವೈದ್ಯರು, ಚಾಲಕರ ನೇಮಕವಾಗಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಶುವೈದ್ಯರು ನಿವೃತ್ತರಾಗಿದ್ದರೂ, ಹೊಸ ನೇಮಕಾತಿಯಾಗಿಲ್ಲ. ಉಳ್ಳಾಲ ಕ್ಷೇತ್ರದಲ್ಲಿ ಹೊಸದಾಗಿ ಮೂರು ಕಟ್ಟಡಗಳು ನಿರ್ಮಾಣಗೊಂಡರೂ ಒಬ್ಬ ಪಶುವೈದ್ಯ, ಸಿಬ್ಬಂದಿಯ ನೇಮಕವಾಗಿಲ್ಲ.
ಚರ್ಮಗಂಟು ರೋಗಕ್ಕೆ ಸರಿಯಾದ ಸಮಯಕ್ಕೆ ರಾಜ್ಯ ಸರಕಾರ ಚಿಕಿತ್ಸೆಯನ್ನು ಭರಿಸದ ಕಾರಣ ರಾಜ್ಯದಲ್ಲಿ ಈವರೆಗೆ 21 ಸಾವಿರ ಜಾನುವಾರುಗಳು ಮೃತಪಟ್ಟಿವೆ. ವಿಧಾನಸಭೆಯಲ್ಲಿ ಹಸುಗಳ ಜನಗಣತಿ ಬಗ್ಗೆ ಮಾತನಾಡಿದಾಗ ಕಳೆದ ಮೂರು ವರ್ಷಗಳಲ್ಲಿ 2018 - 2022ರವರೆಗೆ 14 ಲಕ್ಷ ಹಸುಗಳು ಕಣ್ಮರೆಯಾಗಿದೆ. ಸಿದ್ದರಾಮಯ್ಯನವರು ಈ ಬಗ್ಗೆ ನಿಮ್ಮ ಸರಕಾರ ಬಂದು ಹಸುಗಳು ಎಲ್ಲಿ ಹೋಗಿದೆ ಎಂದರೆ ಬಿಜೆಪಿಯವರಿಂದ ಉತ್ತರ ಇಲ್ಲ. ಸರಕಾರ ಇದ್ದಾಗ 8ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದ್ದ ಹಾಲು 7 ಲಕ್ಷ ಲೀಟರ್ ಗೆ ಇಳಿದಿದೆ ಎಂದರು.