ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ: ಗಣಿತ ದಿವಸ ಆಚರಣೆ ‘ಗಣಿತ ಕಬ್ಬಿಣದ ಕಡಲೆಯಲ್ಲ, ಸರಳ ವಿಜ್ಞಾನ’
ಮಿಜಾರು (ಮೂಡುಬಿದಿರೆ): ಗಣಿತ ಕಬ್ಬಿಣದ ಕಡಲೆಯಲ್ಲ. ಅದು ಸರಳ ವಿಜ್ಞಾನ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಪ್ರಕಾಶ್ ಪ್ರಭು ಹೇಳಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಗಣಿತ ವಿಜ್ಞಾನ ವಿಭಾಗ ಶುಕ್ರವಾರ ಹಮ್ಮಿಕೊಂಡ ಗಣಿತ ದಿವಸದಲ್ಲಿ ಅವರು ಮಾತನಾಡಿದರು.
ಗಣಿತವನ್ನು ಆಸಕ್ತಿದಾಯಕವಾಗಿ ಮಾಡಬಹುದು. ಬಹುತೇಕರಿಗೆ ಕಷ್ಟಕರವಾದ ಗಣಿತವನ್ನು ಮೋಜಿನ ಮೂಲಕ ಸುಲಲಿತವಾಗಿ ಕಲಿಯಬಹುದು. ಗಣಿತ ಪಿತಾಮಹ ಶ್ರೀನಿವಾಸ ರಾಮಾನುಜನ್ ಅವರಿಂದ ಕಲಿಯಲು ಸಾಕಷ್ಟು ವಿಚಾರಗಳಿವೆ ಎಂದು ಅವರು ವಿವರಿಸಿದರು.
ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್ ಮಾತನಾಡಿ, ಎಂಜಿನಿಯರಿAಗ್ ಅಧ್ಯಯನದಲ್ಲಿ ಗಣಿತ ಬಹುಮುಖ್ಯ ವಿಚಾರ. ಆದರೆ, ಬಹುತೇಕ ವಿದ್ಯಾರ್ಥಿಗಳು ಗಣಿತ ಅಧ್ಯಯನದಿಂದ ಬಹುದೂರ ಸರಿಯುತ್ತಾರೆ. ಇಂದಿನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳನ್ನು ಗಣಿತದಲ್ಲಿ ಹೆಚ್ಚು ಆಕರ್ಷಿಸಲು ಸಹಕಾರಿ ಎಂದರು.
ರಾಷ್ಟ್ರೀಯ ಗಣಿತ ದಿವಸದ ಅಂಗವಾಗಿ ಆಯೋಜಿಸದ್ದ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಸಂಸ್ಥೆಯ ಗಣಿತ ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ ಕೊಳಕೆ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಾತ್ವಿಕ್ ಕೆ.ಡಿ ಸ್ವಾಗತಿಸಿದರು. ದೀಕ್ಷಾ ಎಸ್. ವಂದಿಸಿ, ಹರ್ಷಿಕಾ ನಿರೂಪಿಸಿದರು.