ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ವರ್ಕ್ ಫ್ರಂ ಹೋಮ್ ಮಾಡಿದ್ದರೆ ಉಳಿಯುತ್ತಿತ್ತೇ ತಾಯಿ-ಮಗನ ಜೀವ...?
Wednesday, January 11, 2023
ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದು ಸಾಫ್ಟ್ ವೇರ್ ಇಂಜಿನಿಯರ್ ತೇಜಸ್ವಿನಿ (28) ಮತ್ತು ಅವರ ಪುತ್ರ ವಿಹಾನ್ (2) ಮೃತಪಟ್ಟಿರುವುದು ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.
ಅಪಘಾತದ ಸುದ್ದಿ ಹೊರಬಿದ್ದ ವೇಳೆ ದುಃಖಿತರಾಗಿರುವ ತೇಜಸ್ವಿನಿಯ ಅತ್ತೆ ನಿರ್ಮಲಾ “ತಾನು ತೇಜಸ್ವಿನಿಗೆ ವರ್ಕ್ ಫ್ರಂ ಹೋಮ್ ಮಾಡಲು ಹೇಳಿದ್ದೆ. ಆದರೆ ಅವಳು ಒಪ್ಪಲೇ ಇಲ್ಲ. ನಿತ್ಯವೂ ಅರ್ಧ ದಿನ ಆಫೀಸಿನಲ್ಲಿ ಕೆಲಸ ಮಾಡಿ ಬಳಿಕ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದು ಕೆಲಸ ಮಾಡುತ್ತಿದ್ದಳು. ಅದರಿಂದ ಇಷ್ಟೆಲ್ಲಾ ಆಗುತ್ತದೆಂದು ಗೊತ್ತಿರಲಿಲ್ಲ. ನಾನು ಇನ್ನಷ್ಟು ಬಲವಾಗಿ ಒತ್ತಾಯಿಸಿದ್ದರೆ ಆಕೆ ಬದುಕಿರುತ್ತಿದ್ದಳು. ಪ್ಲೇ ಹೋಮ್ ಸೇರಿದ 10 ದಿನಗಳಲ್ಲಿ ನನ್ನ ಮೊಮ್ಮಗ ನನ್ನನ್ನು ಬಿಟ್ಟು ಹೋಗಿದ್ದಾನೆ'' ಎಂದು ರೋದಿಸುತ್ತಿರುವುದು ಎಂಥವರ ಮನವನ್ನು ಕಲುಕುತ್ತದೆ.
ಮೃತಪಟ್ಟ ತೇಜಸ್ವಿನಿಯವರು, ನಿರ್ಮಲಾ ಅವರ ಸಹೋದರನ ಮಗಳಾಗಿದ್ದು, ನಾಲ್ಕು ವರ್ಷಗಳ ಹಿಂದೆ ಲೋಹಿತ್ ಅವರನ್ನು ವಿವಾಹವಾಗಿದ್ದರು. ನಿವೃತ್ತ ಸರ್ಕಾರಿ ನೌಕರೆಯಾಗಿರುವ ನಿರ್ಮಲಾ ಮತ್ತು ಅವರ ಪತಿ ವಿಜಯ್ ತಮ್ಮ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು.