'ಪತ್ನಿಯನ್ನು ಚೆನ್ನಾಗಿ ನೋಡಿಕೋ' ಎಂದು ಬುದ್ಧಿವಾದ ಹೇಳಿದ್ದಕ್ಕೆ ಸಂಬಂಧಿಕರಿಬ್ಬರಿಗೆ ಚೂರಿಯಿಂದ ಇರಿದ: ಓರ್ವ ಸಾವು, ಮತ್ತೋರ್ವ ಗಂಭೀರ
Monday, January 16, 2023
ಬೆಂಗಳೂರು: ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ದರಿಂದ ಕ್ರುದ್ಧನಾದ ವ್ಯಕ್ತಿಯೊಬ್ಬ ಸಂಬಂಧಿಕರಿಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಓರ್ವ ಮೃತಪಟ್ಟು ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಪ್ರಕರಣ ಸೋಲದೇವನಹಳ್ಳಿ ನಡೆದಿದೆ.
ಪೀಣ್ಯ 2ನೇ ಹಂತದ ತಿಗಳರಪಾಳ್ಯ ಮುಖ್ಯರಸ್ತೆಯ ನಿವಾಸಿ ಕೇಶವಮೂರ್ತಿ (32) ಕೊಲೆಯಾದ ದುರ್ದೈವಿ. ಇವರ ಭಾವಮೈದುನ ಕಲ್ಲೇಶ್ (27) ಎಂಬರಿಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ.13ರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ನಿವಾಸಿ ಭರತ್(28) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ಭರತ್ ಹಾಗೂ ಆತನ ಪತ್ನಿ ರಾಧಾ ನಡುವೆ ಪದೇಪದೇ ಜಗಳವಾಗುತ್ತಿತ್ತು. ಕೆಲ ದಿನಗಳ ಹಿಂದೆ ಪತ್ನಿಯೊಂದಿಗೆ ಜಗಳವಾಡಿದ್ದ ಭರತ್ ಮನೆಗೆ ಹೋಗಿರಲಿಲ್ಲ. ಆದ್ದರಿಂದ ರಾಧಾ ತನ್ನ ಅತ್ತೆಯ ಮಗನಾದ ಕೇಶವಮೂರ್ತಿಗೆ ಕರೆ ಮಾಡಿ, 'ತನ್ನ ಪತಿ ಮೂರು ದಿನಗಳಿಂದ ಮನೆಗೆ ಬಂದಿಲ್ಲ. ಎಲ್ಲಾದರೂ ಸಿಕ್ಕಿದ್ದಲ್ಲಿ ಬುದ್ಧಿ ಹೇಳಿ ಮನೆಗೆ ಕಳುಹಿಸು' ಎಂದು ಹೇಳಿದ್ದಾರೆ.
ಕೇಶವಮೂರ್ತಿ ಹಾಗೂ ಆತನ ಭಾವಮೈದುನ ಕಲ್ಲೇಶ್ ಜ.13ರಂದು ರಾತ್ರಿ 8 ಗಂಟೆಗೆ ಆರೋಪಿ ಭರತ್‌ಗೆ ಕರೆ ಮಾಡಿ ಪೀಣ್ಯ 2ನೇ ಹಂತದ ಬಾರ್‌ವೊಂದಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಮೂವರು ಮದ್ಯ ಸೇವಿಸಿದ್ದಾರೆ. ಈ ವೇಳೆ ಕೇಶವಮೂರ್ತಿ, ಮೂರು ದಿನಗಳಿಂದ ಮನೆಗೆ ಹೋಗದಿರುವ ಬಗ್ಗೆ ಭರತ್‌ನನ್ನು ಪ್ರಶ್ನಿಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಬೈದಾಡಿಕೊಂಡು ಬಳಿಕ ಸಮಾಧಾನಗೊಂಡಿದ್ದಾರೆ.
ಹಲ್ಲೆಯಿಂದ ಆಕ್ರೋಶಗೊಂಡಿದ್ದ ಆರೋಪಿ ಭರತ್, ಪತ್ನಿಯ ಊರಾದ ಮತ್ತೂರಿಗೆ ಹೋಗೋಣವೆಂದು ಕೇಶವಮೂರ್ತಿ ಹಾಗೂ ಕಲ್ಲೇಶ್‌ನನ್ನು ಕರೆದಿದ್ದಾನೆ. ಬಳಿಕ ಮೂವರು ದ್ವಿಚಕ್ರ ವಾಹನದಲ್ಲಿ ಮತ್ತೂರು ಕಡೆಗೆ ತೆರಳಿದ್ದಾರೆ. ಆದರೆ ಮಾರ್ಗ ಮಧ್ಯೆ ಹೆಸರಘಟ್ಟ ಮುಖ್ಯರಸ್ತೆ ದ್ವಾರಕನಗರದ ಬಳಿ ಮದ್ಯ ಖರೀದಿಸಿ ಸೇವಿಸಲು ಆರಂಭಿಸಿದ್ದಾರೆ.
ಮದ್ಯ ಸೇವನೆ ನಡುವೆ ರಾತ್ರಿ 10.45ರ ಸುಮಾರಿಗೆ ಆರೋಪಿ ಭರತ್ ಏಕಾಏಕಿ ಕೇಶವಮೂರ್ತಿ ಹಾಗೂ ಕಲ್ಲೇಶ್‌ನನ್ನು ನಿಂದಿಸಲು ಆರಂಭಿಸಿದ್ದು, 'ನನ್ನ ಮಕ್ಕಳ, ನನಗೆ ಬುದ್ಧಿ ಹೇಳುತ್ತೀರಾ. ನಿಮ್ಮನ್ನು ಮರ್ಡರ್ ಮಾಡದೇ ಬಿಡುವುದಿಲ್ಲ' ಎಂದು ಜೇಬಿನಿಂದ ಚಾಕು ತೆಗೆದು ಮೊದಲು ಕಲ್ಲೇಶ್‌ಗೆ ಇರಿದಿದ್ದಾನೆ. ಈ ವೇಳೆ ಕೇಶವಮೂರ್ತಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ, ಅಟ್ಟಾಡಿಸಿ ರಸ್ತೆಗೆ ಕೆಡವಿ ಎದೆ, ಹೊಟ್ಟೆ ಭಾಗಕ್ಕೆ ಹತ್ತಾರು ಬಾರಿ ಇರಿದು ದ್ವಿಚಕ್ರ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಎದೆ ಭಾಗಕ್ಕೆ ತೀವ್ರ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಕೇಶವಮೂರ್ತಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ಸಂಬಂಧ ಗಾಯಾಳು ಕಲ್ಲೇಶ್ ನೀಡಿರುವ ದೂರಿನ ಮೇರೆಗೆ ಕೊಲೆಗೆ ಯತ್ನ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಭರತ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.