ಪುತ್ತೂರು: ಮನೆಯೊಳಗೆ ನುಗ್ಗಿ ಚೂರಿಯಿಂದ ಇರಿದು ಯುವತಿಯ ಹತ್ಯೆ
Tuesday, January 17, 2023
ಪುತ್ತೂರು: ಹಾಡಹಗಲೇ ಯುವತಿಯನ್ನು ಆಕೆಯ ಮನೆಗೆ ನುಗ್ಗಿ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಜಯಶ್ರೀ(23) ಎಂಬಾಕೆ ಚೂರಿ ಇರಿತದಿಂದ ಮೃತಪಟ್ಟ ಯುವತಿ.
ಜಯಶ್ರೀ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ನುಗ್ಗಿರುವ ದುಷ್ಕರ್ಮಿಯೊಬ್ಬ ಆಕೆಯ ಹೊಟ್ಟೆಗೆ ಮನಸೋ ಇಚ್ಛೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಚೂರಿಯನ್ನು ಆಕೆಯ ಹೊಟ್ಟೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಜಯಶ್ರೀ ಚೀರಾಟ ಕೇಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಓಡಿ ಬಂದಾಗ ಆಕೆ ರಕ್ತದ ಮಡುವಲ್ಲಿ ಬಿದ್ದಿದ್ದಳು.
ತೀವ್ರ ರಕ್ತಸ್ರಾವವಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಆಕೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೂರಿಯಿಂದ ಇರಿದವನು ಯುವಕ ಎಂದಷ್ಟೇ ಮಾಹಿತಿ ಲಭಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.