-->
ಸ್ಯಾಂಟ್ರೊ ರವಿ ಬಂಧನದ ಬೆನ್ನಲ್ಲೇ ನಿಮಿಷಾಂಬ ದೇವಿಗೆ ಹರಕೆ ತೀರಿಸಿದ ಎಡಿಜಿಪಿ‌ ಅಲೋಕ್ ಕುಮಾರ್

ಸ್ಯಾಂಟ್ರೊ ರವಿ ಬಂಧನದ ಬೆನ್ನಲ್ಲೇ ನಿಮಿಷಾಂಬ ದೇವಿಗೆ ಹರಕೆ ತೀರಿಸಿದ ಎಡಿಜಿಪಿ‌ ಅಲೋಕ್ ಕುಮಾರ್


ಶ್ರೀರಂಗಪಟ್ಟಣ: ಸ್ಯಾಂಟ್ರೋ ರವಿ ಬಂಧನಗೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಶುಕ್ರವಾರ ಶ್ರೀರಂಗಪಟ್ಟಣದ ಗಂಜಾಂ ಗ್ರಾಮದ ಶಕ್ತಿ ದೇವತೆ ನಿಮಿಷಾಂಬ ದೇವಸ್ಥಾನದಲ್ಲಿ ಹರಕೆ ತೀರಿಸಿದ್ದಾರೆ.

ಕಳೆದ 4 ದಿನಗಳ ಹಿಂದೆ ಇದೇ ದೇವಸ್ಥಾನಕ್ಕೆ ಆಗಮಿಸಿ ಸ್ಯಾಂಟ್ರೋ ರವಿ ಬಂಧನವಾದಲ್ಲಿ ಮತ್ತೆ ದೇಗುಲಕ್ಕೆ ಆಗಮಿಸುವುದಾಗಿ ಹರಕೆ ಹೊತ್ತಿದ್ದರು. ಈ ಹಿನ್ನಲೆಯಲ್ಲಿ ಅಲೋಕ್ ಕುಮಾರ್ ಅವರು ನಿನ್ನೆ ಮತ್ತೆ ಆಗಮಿಸಿ ನಿಮಿಷಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಹರಕೆ ಹೊತ್ತುಕೊಂಡ 26 ಗಂಟೆಗಳಲ್ಲೆ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಲಾಗಿತ್ತು.

ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿರುವ ಅಲೋಕ್ ಕುಮಾರ್ ಅವರು ಪ್ರತಿಕ್ರಿಯಿಸಿ, ನಿಮಿಷಾಂಬ ದೇವಿಯ ಮೇಲೆ ಕಳೆದ 12 ವರ್ಷಗಳಿಂದ ನನಗೆ ನಂಬಿಕೆಯಿದೆ. 2011ರಲ್ಲಿ ಮೈಸೂರಿನಲ್ಲಿ ಡಬಲ್ ಕೇಸ್ ಆಗಿದ್ದಾಗಲೂ  ನಾನು ಇದೇ ದೇವಿಗೆ ಹರಕೆ ಹೊತ್ತಿದ್ದೆ. ಹಾಗೆ ಹರಕೆ ಹೊತ್ತು ಪೂಜೆ ಸಲ್ಲಿಸಿ ನಾವು ಮೈಸೂರಿಗೆ ಹೋಗುವುದರೊಳಗಾಗಿ ಕೇವಲ 5 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈಗಲೂ ಜ.10ರಂದು ಬಂದು ನಾನು ಪೂಜೆ ಸಲ್ಲಿಸಿ ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಹರಕೆ ಹೊತ್ತಿದ್ದೆ. ಈಗಲೂ ಹರಕೆ ಹೊತ್ತ 22 ಗಂಟೆಗಳಲ್ಲೇ ಆರೋಪಿ ಸಿಕ್ಕಿದ್ದಾನೆ. ಹಾಗಾಗಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇನೆ ಎಂದರು.

ಆತನಿಂದಾಗಿ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು. ಹಾಗಾಗಿ ಆತ ಆದಷ್ಟು ಶೀಘ್ರದಲ್ಲಿ ನಮ್ಮ ಕೈಗೆ ಸಿಗಲಿ ಎಂದು ಹರಕೆ ಹೊತ್ತಿದ್ದೆ. ಆತ ಈಗ ನಮ್ಮ‌ ಕಸ್ಟಡಿಯಲ್ಲಿದ್ದಾನೆ. ಆತನ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಮೊದಲು ಆತನ ವಿರುದ್ಧ ದಾಖಲಾಗಿರುವ ಕೇಸ್ ಬಗೆಗೆ ವಿಚಾರಣೆ ನಡೆಯುತ್ತದೆ. ಬಳಿಕ ಆತ ತಲೆ ಮರೆಸಿಕೊಂಡು ಎಲ್ಲೆಲ್ಲಿ ಇದ್ದ, ಆತನಿಗೆ ಯಾರೆಲ್ಲಾ ಸಹಾಯ ಮಾಡಿದರು ಎಂಬುದರ ಬಗ್ಗೆ ವಿಚಾರಣೆ ಮಾಡುತ್ತೇವೆ. ಯಾರಾದರೂ ಸಹಾಯ ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಅಲೋಕ್ ಕುಮಾರ್ ಹೇಳಿದರು.



Ads on article

Advertise in articles 1

advertising articles 2

Advertise under the article