ಪ್ರೀತಿಸಿ ವಂಚನೆ ಮನನೊಂದ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ: ಬಿಜೆಪಿ ಕಾರ್ಯಕರ್ತನ ಮೇಲೆ ಪೊಕ್ಸೊ ಪ್ರಕರಣ ದಾಖಲು
Sunday, January 15, 2023
ಚಿಕ್ಕಮಗಳೂರು: ಬಿಜೆಪಿ ಹಾಗೂ ಬಜರಂಗದಳದ ಸಕ್ರಿಯ ಕಾರ್ಯಕರ್ತನೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುವುದಾಗಿ ನಂಬಿಸಿ ವಂಚಿಸಿದ ಪರಿಣಾಮ ನೊಂದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಕಳಸೆ, ಸಂಸೆ ಗ್ರಾಪಂ ವ್ಯಾಪ್ತಿಯ ಜೋಗಿಕುಂಬ್ರಿ ಗ್ರಾಮದ ನಿವಾಸಿ ದೀಪ್ತಿ(17) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಬಿಜೆಪಿ ಹಾಗೂ ಬಜರಂಗದಳದಲ್ಲಿ ಸಕ್ರಿಯ ಕಾರ್ಯಕರ್ತ, ಕಾರಗದ್ದೆ ಗ್ರಾಮದ ನಿವಾಸಿ ನಿತೇಶ್ ಎಂಬಾತನ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ.
ದೀಪ್ತಿಯನ್ನು ಪ್ರೀತಿಸಿ ಬಳಿಕ ಮೋಸ ಮಾಡಿದ್ದರಿಂದ ನೊಂದ ವಿದ್ಯಾರ್ಥಿನಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ. ದೀಪ್ತಿ ಹಾಗೂ ನಿತೇಶ್ ಒಂದೇ ಸಮುದಾಯದವರು. ಇಬ್ಬರೂ ಪರಸ್ಪರ ಪರಿಚಯಸ್ಥರಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ನಿತೇಶ್ ಪ್ರೀತಿಯನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಪರಿಣಾಮ ತೀವ್ರವಾಗಿ ಮನನೊಂದ ದೀಪ್ತಿ ಜ.10ರಂದು ಬೆಳಗ್ಗೆ ತನ್ನ ಮನೆಯಲ್ಲಿದ್ದ ಕಳೆನಾಶಕ ಔಷಧವನ್ನು ಸೇವಿಸಿದ್ದಾಳೆ. ಇದರಿಂದ ತೀವ್ರವಾಗಿ ಅಸ್ವಸ್ಥಳಾದ ದೀಪ್ತಿಯನ್ನು ಕುಟುಂಬಸ್ಥರು ಕಳಸ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ತಕ್ಷಣ ದೀಪ್ತಿಯನ್ನು ಮಂಗಳೂರು ನಗರದ ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ದೀಪ್ತಿಗೆ ಅಲ್ಲಿನ ವೈದ್ಯರು 4 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ದೀಪ್ತಿ ಜ.14ರಂದು ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೀಪ್ತಿಯ ತಂದೆ ಚೆನ್ನೇಗೌಡ ಶನಿವಾರ ಕುದುರೆಮುಖ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಪುತ್ರಿಯ ಸಾವಿಗೆ ಕಾರಣನಾದ ನಿತೇಶ್‌ನನ್ನು ಬಂಧಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ದೀಪ್ತಿ ವಿಷ ಸೇವನೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವುದಾಗಿ ಕುಟುಂಬಸ್ಥರ ಬಳಿ ತಿಳಿಸಿದ್ದಾಳೆ. ಆದರೆ ಕುದುರೆಮುಖ ಠಾಣಾಧಿಕಾರಿಗಳು ದೂರು ನೀಡಿ ಒಂದು ದಿನ ಕಳೆದರೂ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಕುದುರೆಮುಖ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಮೃತಳ ಕುಟುಂಬಸ್ಥರು ಎಸ್ಪಿ ಬಳಿ ಅಳಲು ತೋಡಿಕೊಂಡಿದ್ದಾರೆ.
ಎಸ್ಪಿ ಕುದುರೆಮುಖ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರು ಘಟನೆ ಸಂಬಂಧ ಬಿಜೆಪಿ ಕಾರ್ಯಕರ್ತ ನಿತೇಶ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.