
ತಂದೆಯ ವಿರುದ್ಧವೇ ಠಾಣೆಯ ಮೆಟ್ಟಿಲು ಹತ್ತಿದ ಪುತ್ರ: ಕಾರಣ ಕೇಳಿ ದಂಗಾದ ಪೊಲೀಸರು
Monday, January 2, 2023
ಕೊಚ್ಚಿ: ಮಕ್ಕಳಿಗೆ ಪೊಲೀಸ್ ಬಗ್ಗೆ ಭಯ ಇದ್ದೇ ಇರುತ್ತದೆ. ಹಾಗಾಗಿ ಪೋಷಕರು ಸಣ್ಣ ಮಕ್ಕಳನ್ನು ಬೆದರಿಸಲು ಪೊಲೀಸರನ್ನು ಉಲ್ಲೇಖಿಸುತ್ತಾರೆ. ಆದ್ದರಿಂದ ಸಹಜವಾಗಿ ಮಕ್ಕಳಿಗೆ ಪೊಲೀಸರ ಬಗ್ಗೆ ಭಯ ಇರುತ್ತದೆ. ಆದರೆ ಇಲ್ಲೊಬ್ಬ ಬಾಲಕ ಮಾತ್ರ ಕೊಂಚವೂ ಅಂಜದೆ ಪೊಲೀಸ್ ಠಾಣೆ ಮೆಟ್ಟಿಲೇರಿ ತನ್ನ ತಂದೆಯ ವಿರುದ್ಧ ಹಣದ ವಿಚಾರವಾಗಿ ದೂರು ನೀಡಿ ಬಂದಿದ್ದಾನೆ.
ಕೇರಳದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂ ಎಂಬಲ್ಲಿ ಈ ಘಟನೆ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಅಜ್ಜಿ 'ಪಾಕೆಟ್ ಮನಿ' ಎಂದು 300 ರೂ. ನೀಡಿದ್ದರು. ಬಾಲಕ ಈ ಹಣವನ್ನು ತನ್ನಿಷ್ಟದಂತೆ ಖರ್ಚು ಮಾಡಲು ಜೋಪಾನವಾಗಿ ಇಟ್ಟಿದ್ದ. ಆದರೆ ತಂದೆ ಈ ಪಾಕೆಟ್ ಮನಿಯನ್ನು ಕೇಳಿದ್ದರು. ತಂದೆಯೇ ಕೇಳಿದ್ದರಿಂದ ಪುತ್ರ ತಾನು ಸಂಗ್ರಹಿಸಿಟ್ಟುಕೊಂಡಿದ್ದ 300 ರೂ.ವನ್ನು ನೀಡಿದ್ದ. ತಂದೆ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು.
ಆದರೆ ತಂದೆ ನೀಡಿರುವ ಭರವಸೆ ಸುಳ್ಳಾಗಿದ್ದು, ಪುತ್ರ ಎಷ್ಟೇ ಕೇಳಿದರೂ ತಂದೆ ಮಾತ್ರ ಹಣ ಹಿಂತಿರುಗಿಸಲೇ ಇಲ್ಲ. ಇದರಿಂದ ಬೇಸತ್ತ ಈ ವಿದ್ಯಾರ್ಥಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ, ತಂದೆಯ ವಿರುದ್ಧವೇ ದೂರು ನೀಡಿದ್ದಾನೆ. ಈತ ನೀಡಿರುವ ದೂರಿನಿಂದ ಒಂದು ಕ್ಷಣ ಪೊಲೀಸರೇ ಗೊಂದಲಕ್ಕೊಳಗಾಗಿದ್ದಾರೆ. ಈ ವೇಳೆ ಪೊಲೀಸರು ವಿದ್ಯಾರ್ಥಿಯಲ್ಲಿ ನಿನಗೆ ಹಣ ಯಾಕೆ ಬೇಕು ಎಂದು ಕೇಳಿದ್ದಾರೆ. ಆಗ ಆತ ತನಗೆ ತಮಿಳು ನಟ ವಿಜಯ್ ಸಿನಿಮಾ ನೋಡಲು ಹಣದ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದಾನೆ. ಬಳಿಕ ಆ ಬಾಲಕನ ಮನವೊಲಿಸಿರುವ ಪೊಲೀಸರು, ಸಾಧ್ಯವಾದಷ್ಟು ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿ ಮನೆಗೆ ಕಳುಹಿಸಿದ್ದಾರೆ.
ಘಟನೆಯ ಬಗ್ಗೆ ಠಾಣಾಧಿಕಾರಿ ಬಿ.ಎಸ್.ಬಿನು ವಿದ್ಯಾರ್ಥಿಯ ಪೋಷಕರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಬಳಿಕ ಬಾಲಕನಲ್ಲಿ 'ನಿನ್ನ ತಂದೆ ಬಹಳ ಒಳ್ಳೆಯವರು. ಅವರನ್ನು ಪೊಲೀಸ್ ಠಾಣೆಗೆ ಕರೆಸುವುದು ಬೇಡ. ನಿನ್ನ ಹಣವನ್ನು ಹಿಂತಿರುಗಿಸಲು ಸೂಚಿಸಿದ್ದೇನೆ' ಎಂದು ಹೇಳಿ ಠಾಣಾಧಿಕಾರಿ ತಂದೆ - ಮಗನ ಆರ್ಥಿಕ ವ್ಯವಹಾರದ ಭಿನ್ನಾಭಿಪ್ರಾಯವನ್ನು ಇತ್ಯರ್ಥಗೊಳಿಸಿದ್ದಾರೆ.