-->
ಕೊನೆಗೂ ಪೊಲೀಸ್ ಖೆಡ್ಡಾಕ್ಕೆ ಬಿದ್ದ ಸ್ಯಾಂಟ್ರೊ ರವಿ: ಗುಜರಾತ್ ನಲ್ಲಿ ಕರ್ನಾಟಕ ಪೊಲೀಸರಿಂದ ಬೇಟೆ

ಕೊನೆಗೂ ಪೊಲೀಸ್ ಖೆಡ್ಡಾಕ್ಕೆ ಬಿದ್ದ ಸ್ಯಾಂಟ್ರೊ ರವಿ: ಗುಜರಾತ್ ನಲ್ಲಿ ಕರ್ನಾಟಕ ಪೊಲೀಸರಿಂದ ಬೇಟೆ


ಬೆಂಗಳೂರು: ಭಾರೀ ಕುತೂಹಲ ಸೃಷ್ಟಿಸಿದ್ದ ಹಲವು ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ ಕೊನೆಗೂ 11 ದಿನಗಳ ಬಳಿಕ ಖಾಕಿ ಬಲೆಗೆ ಬಿದ್ದಿದ್ದಾನೆ.

ಪತ್ನಿಗೆ ಕಿರುಕುಳ, ಮಹಿಳೆ ಮೇಲೆ ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆ ಹೀಗೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ಆರೋಪಿ ಸ್ಯಾಂಟ್ರೋ ರವಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಈತನನ್ನು ಖೆಡ್ಡಾಕ್ಕೆ ಕೆಡವಿ ಹಾಕಲು ಕರ್ನಾಟಕ ಪೊಲೀಸರು ವಿಶೇಷ ತಂಡ ರಚಿಸಿ 9 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಕೊನೆಗೂ ಸ್ಯಾಂಟ್ರೋ ರವಿ ಶುಕ್ರವಾರ ಗುಜರಾತ್‌ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸ್ಯಾಂಟ್ರೋ ರವಿ ವಿರುದ್ಧ ಈತನ ಪತ್ನಿಯೇ ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಬಳಿಕ ಈತನ ಒಂದೊಂದೇ ಕೃತ್ಯಗಳು ಮಾಧ್ಯಮಗಳಲ್ಲಿ ಬಯಲಾಗಿ ಒಂದೊಂದೇ ಕರಾಳ ಮುಖ ಪ್ರಸಾರವಾಗಿದೆ. ಆದ್ದರಿಂದ ಸ್ಯಾಂಟ್ರೋ ರವಿಯ ಬಂಧನಕ್ಕೆ ಸಾರ್ವಜನಿಕ ವಲಯದಲ್ಲೂ ಆಗ್ರಹ ಕೇಳಿಬಂದಿತ್ತು. ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಚಿವರುಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈತನ ಹಿನ್ನೆಲೆ ಬಗೆದಷ್ಟು ಆಳ ಎಂಬಂತಿದ್ದು, ಒಂದೊಂದೇ ಕರಾಳ ವಿಚಾರ ಬಯಲಾಗುತ್ತಲೇ ಇದೆ. 

ಸ್ಯಾಂಟ್ರೋ ರವಿ ಕೇವಲ ಪಿಂಪ್ ಮಾತ್ರವಲ್ಲ ಕಾರು ಕಳವು ಆರೋಪಿಯೂ ಹೌದು. ವರ್ಗಾವಣೆ ದಂಧೆಯ ಕಿಂಗ್‌ಪಿನ್ ಆಗಿರುವ ಸ್ಯಾಂಟ್ರೋ ರವಿ ಬಳಿ ಈಗಾಗಲೇ ಸಚಿವರ ಲೆಟರ್‌ಹೆಡ್‌ಗಳು ಪತ್ತೆಯಾಗಿವೆ. ಇನ್‌ಸ್ಪೆಕ್ಟರ್, ಎಸಿಪಿ, ಡಿವೈಎಸ್ಪಿಗಳಿಗೆ ಪ್ರಮೋಷನ್- ವರ್ಗಾವಣೆಯಲ್ಲಿ ಈತನೇ ಮಾಸ್ಟರ್ ಅಂತೆ. ವರ್ಗಾವಣೆ ದಂಧೆಯಲ್ಲಿ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದ. ಇದರಲ್ಲಿ ಹಲವು ಸಚಿವರು-ಶಾಸಕರು ಈತನ ಜತೆ ಶಾಮೀಲಾಗಿದ್ದರು ಎನ್ನಲಾಗಿದೆ.

ಮಂಡ್ಯದವನಾದ ಸ್ಯಾಂಟ್ರೊ‌ ರವಿಯ ನಿಜ ಹೆಸರು ಮಂಜುನಾಥ. ಆರಂಭದಲ್ಲಿ ಕಳ್ಳತನಕ್ಕಿಳಿದಿದ್ದ ಈತ ಬಳಿಕ ಅಪಹರಣ ಮತ್ತು ವೇಶ್ಯಾವಾಟಿಕೆ ದಂಧೆಗಿಳಿದಿದ್ದ. ಹಲವು ಬಾರಿ ಈತ ಜೈಲಿಗೂ ಹೋಗಿ ಬಂದಿದ್ದಾನೆ. ತನ್ನ ಕೃತ್ಯಕ್ಕೆ ಸ್ಯಾಂಟ್ರೋ ಕಾರನ್ನೇ ಬಳಸುತ್ತಿದ್ದರಿಂದ ಈತನಿಗೆ ಸ್ಯಾಂಟ್ರೋ ರವಿ ಎಂಬ ಹೆಸರು ಅಂಟಿಕೊಂಡಿತ್ತು. ಈತ ಸ್ಯಾಂಟ್ರೋ ಕಾರಿನಲ್ಲೇ ಯುವತಿಯರನ್ನು ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹಿಂದೆ ಇರುವ ಸ್ಯಾಂಟ್ರೋ ರವಿ ಈಗ ಇರುವ ಆತನ ವೇಷಭೂಷಣಕ್ಕೆ ಬಹಳ ವ್ಯತ್ಯಾಸವಿದೆ. ಆಗ ನೋಡಿದವರಿಗೆ ಈಗ ಗುರುತು ಸಿಗಲಿಕ್ಕಿಲ್ಲ. ಕೈಗೆ ಕಾಸು ಬಂದ ಮೇಲೆ ತನ್ನ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದ ರವಿ. ಈಗ ತಲೆಗೆ ಟೋಕನ್ ಹಾಕಿಕೊಂಡು, ಕನ್ನಡಕ ಹಾಕಿಕೊಂಡು ಟಿಪ್ ಟಾಪ್‌ ಆಗಿ ಕಾಣಿದಿಕೊಳ್ಳಲಾರಂಭಿಸಿದ್ದಾನೆ‌. ಓರ್ವ ಪಿಂಪ್ ಆಗಿದ್ದ ಮಂಡ್ಯ ಬಿಟ್ಟು ಮೈಸೂರಿಗೆ ತೆರಳಿದವ ವೇಶ್ಯಾವಾಟಿಕೆ ದಂಧೆಯಲ್ಲಿ ಚಿಗುರಿದ್ದ. ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

ಪಿಯುಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ 1995ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಈತ. ಪುಡಿರೌಡಿಗಳೊಂದಿಗೆ ಸೇರಿ ಅಸಭ್ಯತನ ಮೆರೆಯುತ್ತಿದ್ದ. 2000ದಿಂದಲೂ ಸ್ಯಾಂಟ್ರೋ ರವಿ ದಂಧೆ ಮಾಡುತ್ತಿದ್ದ. ಮೈಸೂರು, ಬೆಂಗಳೂರು ಸೇರಿ ನಾನಾ ಕಡೆ ಈತನ ವಿರುದ್ಧ ಪ್ರಕರಣಗಳಿವೆ. ತನ್ನ ಕೃತ್ಯ ಬಯಲು ಮಾಡಿದವರ ವಿರುದ್ಧ ರಾಜಕೀಯ ಪ್ರಭಾವ ಬಳಸಿ ಕೇಸ್ ದಾಖಲಿಸುತ್ತಿದ್ದ. ಸ್ಯಾಂಟ್ರೋ ರವಿಗೆ ಬೆಂಗಳೂರಿನಲ್ಲಿ ಮೂರು ಮನೆ, ವಿಲ್ಸನ್ ಗಾರ್ಡನ್, ಕೆಆರ್ ನಗರ ಹಾಗೂ ಮಲ್ಲೇಶ್ವರಂನಲ್ಲೂ ಮನೆಗಳಿವೆ. ಮೈಸೂರಿನಲ್ಲೂ ಮನೆಗಳಿವೆ ಎಂದು ತಿಳಿದುಬಂದಿದೆ. ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದ. ಈತನಿಗಾಗಿ ಬಲೆ ಬೀಸಿದ್ದ ಪೊಲೀಸರ ಕೈಗೆ ಈತ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

Ads on article

Advertise in articles 1

advertising articles 2

Advertise under the article