
ಮಾಜಿ ಸಚಿವ, ಪ್ರಭಾವೀ ಉದ್ಯಮಿಗಳ ಹೆಸರು ಬರೆದಿಟ್ಟು ತಲೆಗೆ ಗುಂಡು ಹಾರಿಸಿ ವ್ಯಕ್ತಿ ಮೃತ್ಯು
Monday, January 2, 2023
ರಾಮನಗರ: ರಾಜಕಾರಣಿಯ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ವ್ಯಕ್ತಿಯೊಬ್ಬರು ತಲೆಗೆ ಗುಂಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆಗೂ ಮುನ್ನ ಮಾಜಿ ಸಚಿವ ಹಾಗೂ ಐವರು ಉದ್ಯಮಿಗಳ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದಿಟ್ಟು ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಎಚ್ ಎಸ್ಎಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾದವರು.
ಹೊಸ ವರ್ಷಾಚರಣೆ ಸಲುವಾಗಿ ಕುಟುಂಬ ಸಹಿತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್‌ಗೆ ಕುಟುಂಬ ಸಮೇತ ಪ್ರದೀಪ್ ಬಂದಿದ್ದರು. ರಾತ್ರಿ ಪಾರ್ಟಿ ಮುಗಿಸಿ, ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್‌ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಹೊರಟಿದ್ದರು. ಅಲ್ಲಿಂದ ನೇರವಾಗಿ ತಮ್ಮ ಮನೆಗೆ ಬಂದು ಡೆತ್ ನೋಟ್ ಬರೆದಿದ್ದಾರೆ. ಬಳಿಕ ರೆಸಾರ್ಟ್‌ಗೆ ವಾಪಸ್ಸಾಗಿ ಕಾರಿನಲ್ಲಿ ಮತ್ತೊಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಬಳಿಕ ಕುಟುಂಬದವರು ಹೊರಟ್ಟಿದ್ದ ಕಾರನ್ನು ಓವರ್ ಟೇಕ್ ಮಾಡಿ, ತಾನು ಚಲಾಯಿಸುತ್ತಿದ್ದ ಕಾರಿನಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ಅವರು, 'ಎಚ್ಎಸ್ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲೆಂದು ಐವರು ತನ್ನ ಬಳಿ ಮಾತನಾಡಿದ್ದಾರೆ. 1.50 ಕೋಟಿ ರೂ. ಹಣ ಪಡೆದುಕೊಂಡು, ತನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿ, ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆಯಲ್ಲಿ ತನಗೆ ಮೋಸ ಮಾಡಿದ್ದಾರೆ. ಒಟ್ಟು 2.50 ಕೋಟಿ ರೂ. ಹಣ ನನಗೆ ಬರಬೇಕು.
ಈ ನಡುವೆ ಮಾಜಿ ಸಚಿವರೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಅದರಂತೆ ತಿಂಗಳಿಗೆ ಒಂದು ಲಕ್ಷ ರೂ.ನಂತೆ ಹಣ ನೀಡುವ ಮಾತುಕತೆ ನಡೆಸಿದ್ದರು. ಆದರೆ ಕೇವಲ 9 ಲಕ್ಷ ರೂ. ಹಣವಷ್ಟೆ ಬಂದಿದೆ. ಮಾಜಿ ಸಚಿವರು ಕೂಡ ತನಗೆ ಸಹಾಯ ಮಾಡಿಲ್ಲ ಎಂದು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಪ್ರಕರಣದ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.