ಮಂಗಳೂರಿನಲ್ಲಿ ನಡೆಯಿತು ಕರುಣಾಜನಕ ಕ್ರೈಂ ಸ್ಟೋರಿ- ಪ್ರೀತಿಸುತ್ತಿದ್ದ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ - ಕಾರಣ ಇಲ್ಲಿದೆ
Saturday, January 28, 2023
ಮಂಗಳೂರು: ಬದುಕಿನಲ್ಲಿ ಎದುರಾದ ಸಂಕಷ್ಟವೊಂದು ಹಿರಿ ದಂಪತಿಯನ್ನು ಹೈರಾಣು ಮಾಡಿದ್ದು, ಇದೀಗ ಇಬ್ಬರ ಜೀವವನ್ನೇ ಬಲಿ ಪಡೆದಿದೆ. ಅಷ್ಟಕ್ಕೂ ಇವರಿಗೆ ಹಣಕಾಸಿನ ತೊಂದರೆಯೇನಿಲ್ಲ. ಹೆಣ್ಣು ಮಕ್ಕಳಿಬ್ಬರೂ ಮದುವೆಯಾಗಿ ಪತಿಗೃಹದಲ್ಲಿ ಸಂತೋಷವಾಗಿದ್ದಾರೆ. ಆದರೆ ಪತ್ನಿ ಅನಾರೋಗ್ಯ ಪೀಡಿತೆಯಾಗಿ ನರಳುತ್ತಿರುವುದನ್ನು ನೋಡಿ ಸಹಿಸಲಾಗದ ಪತಿ ಆಕೆಯನ್ನೇ ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು... ಈ ಘಟನೆ ನಗರದ ಬಿಜೈ ಕಾಪಿಕಾಡ್ 4 ನೇ ಕ್ರಾಸ್ ಪೂನಮ್ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಶೈಲಜಾರಾವ್ (64) ಸಾವಿಗೀಡಾದ ಪತ್ನಿ. ದಿನೇಶ್ ರಾವ್ (67) ಪತ್ನಿಯನ್ನೇ ಕೊಂದು ಸಾವಿಗೆ ಶರಣಾದ ಪತಿ.
ದಿನೇಶ್ ರಾವ್ ಕೆನರಾ ಬ್ಯಾಂಕ್ ನ ನಿವೃತ್ತ ಉದ್ಯೋಗಿ. ನರ ದೌರ್ಬಲ್ಯದಿಂದ ಅನಾರೋಗ್ಯ ಪೀಡಿತೆಯಾಗಿರುವ ಇವರ ಶೈಲಜಾ ಮಲಗಿದಲ್ಲೇ ಇದ್ದರು. ಇವರ ಆರೈಕೆ ಇಬ್ಬರು ಹೋಮ್ ನರ್ಸ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಹಾಗೂ ಹಗಲಿನಲ್ಲಿ ಇಬ್ಬರು ಪ್ರತ್ಯೇಕವಾಗಿ ಶೈಲಜಾ ಆರೈಕೆ ಮಾಡುತ್ತಿದ್ದರು.
ನಿನ್ನೆ ರಾತ್ರಿ ಪಾಳಿಯಲ್ಲಿದ್ದ ಹೋಮ್ ನರ್ಸ್ ಇಂದು ಬೆಳಗ್ಗೆ 6.30ಕ್ಕೆ ಹಿಂತಿರುಗಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಪತಿ ದಿನೇಶ್ ರಾವ್ ಬೆಳಗ್ಗೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಪತ್ನಿ ಶೈಲಜಾ ರಾವ್ ಅವರನ್ನು ಕೊಲೆಗೈದೇ ಬಿಟ್ಟಿದ್ದಾರೆ. ಪತ್ನಿ ಸತ್ತಿರುವುದನ್ನು ಖಚಿತಪಡಿಸಿಕೊಂಡ ಬಳಿಕ ದಿನೇಶ್ ರಾವ್ ಬೆಡ್ ರೂಮ್ ನಲ್ಲಿ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 8.30ರ ವೇಳೆಗೆ ಮತ್ತೊಬ್ಬ ಹೋಮ್ ನರ್ಸ್ ಮನೆಗೆ ಬಂದಾಗಲೇ ಈ ವಿಚಾರ ತಿಳಿದು ಬಂದಿದೆ.
ಇವರಿಗೆ ಇಬ್ಬರು ಪುತ್ರಿಯರಿದ್ದು, ಓರ್ವಾಕೆ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಮತ್ತೊಬ್ಬಾಕೆ ಮೈಸೂರಿನಲ್ಲಿದ್ದಾರೆ. ದಿನೇಶ್ ರಾವ್ ಅವರು ಪತ್ನಿ ಶೈಲಜಾ ರಾವ್ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಆಕೆಯ ಅನಾರೋಗ್ಯ ಸ್ಥಿತಿ ದಿನೇಶ್ ರಾವ್ ಅವರನ್ನು ಖಿನ್ನತೆಗೆ ತಳ್ಳಿತ್ತು. ಪತ್ನಿಯೆ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ಅವರು ಇದೇ ಚಿಂತೆಯಲ್ಲಿ ಪತ್ನಿಯನ್ನು ಕೊಂದು ನೇಣು ಹಾಕಿ ಸಾವಿಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಉರ್ವಾ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಪರಿಶೀಲನೆ ನಡೆಸಿದರು.