ಕೆಲಸದೊತ್ತಡ ತಾಳಲಾರೆ...' ಎಂದು ರಾಸಾಯನಿಕ ಚುಚ್ಚಿ ಆತ್ಮಹತ್ಯೆಗೆ ಶರಣಾದ ಯುವವೈದ್ಯೆ
Saturday, January 7, 2023
ಮಧ್ಯಪ್ರದೇಶ: ಇಲ್ಲಿನ ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಯ 24 ವರ್ಷದ ಯುವ ವೈದ್ಯೆ ತನ್ನ ದೇಹಕ್ಕೆ ಶಂಕಾಸ್ಪದ ರಾಸಾಯನಿಕ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗ್ವಾಲಿಯರ್ ಮೂಲದ ಆಕಾಂಕ್ಷಾ ಮಹೇಶ್ವರಿ ಮೃತಪಟ್ಟ ವೈದ್ಯೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸ್ನಾತಕೋತ್ತರ ಪದವಿ ಪಡೆದಿರುವ ವೈದ್ಯೆ ಆಕಾಂಕ್ಷಾ ಮಹೇಶ್ವರಿ ಬರೆದ ಡೆತ್ ಪತ್ತೆಯಾಗಿದ್ದು, 'ನಾನು ಇಷ್ಟೊಂದು ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. 'ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಇತರೆ ವೈದ್ಯರು ಮತ್ತು ಆಕಾಂಕ್ಷಾ ಸಹೋದ್ಯೋಗಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮೃತದೇಹದ ಪರೀಕ್ಷೆಯ ವರದಿ ಬರುವವರೆಗೂ ಪ್ರಕರಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಅತಿದೊಡ್ಡ ಸರ್ಕಾರಿ ವೈದ್ಯಕೀಯ ಕಾಲೇಜು ಗಾಂಧಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಹಾಸ್ಟೆಲ್ ಕೊಠಡಿಯಲ್ಲಿ ವೈದ್ಯೆ ಆಕಾಂಕ್ಷಾ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಬೆಳಗ್ಗೆ ಕರ್ತವ್ಯಕ್ಕೆ ತೆರಳಿರುವ ಅವರು ಅನಾರೋಗ್ಯವೆಂದು ಬೇಗನೇ ತಮ್ಮ ಹಾಸ್ಟೆಲ್ ಕೊಠಡಿಗೆ ಮರಳಿದ್ದಾರೆ. ಆದರೆ ಸಂಜೆ ಕೆಲಸ ಮುಗಿಸಿ ಹಾಸ್ಟೆಲ್ ರೂಮ್‌ಗೆ ಬಂದ ಇತರೆ ವೈದ್ಯರು, ಆಕಾಂಕ್ಷಾ ಕೊಠಡಿಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಜಿಎಂಸಿ ಮುಖ್ಯಸ್ಥರು ಮತ್ತು ಹಿರಿಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.