ಮನೆಗೆ ಬಾ ಎಂದು ಕರೆದ ಪತಿಯ ನಾಲಗೆಯನ್ನು ಕಚ್ಚಿ ಕತ್ತರಿಸಿ ಪತ್ನಿ
Sunday, January 29, 2023
ಲಖನೌ: ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬೊಂದು ಮಾತಿದೆ. ಆದರೆ ಇಲ್ಲೊಂದು ದಂಪತಿ ನಡುವೆ ಜಗಳ ನಡೆದು ಪತ್ನಿಯೇ ಪತಿಯ ನಾಲಗೆ ಕಚ್ಚಿ ತುಂಡರಿಸಿರುವ ಘಟನೆ ನಡೆದಿದೆ. ಕಾರಣ ಮಾತ್ರ ಕೇಳಿದರೆ ದಂಗಾಗ್ತೀರಾ.
ಉತ್ತರಪ್ರದೇಶದ ಲಖನೌದಲ್ಲಿನ ಠಾಕೂರ್‌ಗಂಜ್ ಪ್ರದೇಶದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪತಿ ಮುನ್ನಾ ಹಾಗೂ ಪತ್ನಿ ಸಲ್ಮಾ ನಡುವೆ ಜಗಳ ನಡೆದಿತ್ತು. ಇದು ಮೊದಲಲ್ಲ, ಈ ದಂಪತಿ ನಡುವೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯವಿತ್ತು. ಪರಿಣಾಮ ಆಗಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಸಲ್ಮಾ ಮಕ್ಕಳೊಂದಿಗೆ ಸೀದಾ ತವರು ಮನೆ ಸೇರಿದ್ದಳು. ಈಕೆಯನ್ನು ವಾಪಸ್ ಬಾ ಎಂದು ಕರೆಯಲು ಪತಿ ಮುನ್ನಾ ಶುಕ್ರವಾರ ಪತ್ನಿಯ ತವರು ಮನೆಗೆ ಬಂದಿದ್ದ.
ಪತಿ ತನ್ನೊಂದಿಗೆ ಬಾ ಎಂದು ಒತ್ತಾಯಿಸುತ್ತಿದ್ದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ಹೋಗಿ ಜಗಳವಾಗಿದೆ. ಎಷ್ಟು ಹೇಳಿದರೂ ಪತಿ ಸುಮ್ಮನಾಗದಿದ್ದಾಗ ಕೊನೆಗೊಮ್ಮೆ ರೊಚ್ಚಿಗೆದ್ದ ಪತ್ನಿ ಪತಿಯ ಮೇಲೆರಗಿ ಆತನ ನಾಲಗೆಗೇ ಕಚ್ಚಿದ್ದಾಳೆ. ಅದರ ತೀವ್ರತೆಗೆ ನಾಲಗೆ ತುಂಡಾಗಿ ಕೆಳಕ್ಕೆ ಬಿದ್ದಿದೆ. ಮುನ್ನಾ ಕೂಡ ನೋವಿನಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪತಿಗೆ ಚಿಕಿತ್ಸೆ ನಡೆಯುತ್ತಿದ್ದು, ಪತ್ನಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.