ಶ್ವಾನ ಕಚ್ಚಿದ 12 ವರ್ಷಗಳ ಬಳಿಕ ಮಾಲಕನಿಗೆ 3 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
Monday, February 6, 2023
ಮುಂಬೈ: ರೊಟ್‌ಲರ್ ಶ್ವಾನವೊಂದು ವ್ಯಕ್ತಿಯೋರ್ವನನ್ನು ಕಚ್ಚಿದ 12 ವರ್ಷಗಳ ಬಳಿಕ ನಾಯಿಯ ಮಾಲಕನಿಗೆ ಮುಂಬೈನ ನ್ಯಾಯಾಲಯವು ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಶ್ವಾನದ ಮಾಲಕ ಸೈರಸ್ ಪರ್ಸಿ ಹಾರ್ಮುಸ್ಟಿ (44)ಗೆ ನ್ಯಾಯಾಲಯ ಐಪಿಸಿ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಹಾಗೂ 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆಯಿಂದ ನೋವುಂಟುಮಾಡುವುದು) ಅಪರಾಧಗಳಲ್ಲಿ ತಪ್ಪಿತಸ್ಥನೆಂದು ತೀರ್ಪು ನೀಡಿದೆ. 2010ರ ಮೇ ತಿಂಗಳಲ್ಲಿ ಮುಂಬೈನ ನೆಪಿಯನ್ ಸೀ ರೋಡ್‌ನಲ್ಲಿ ಈ ಶ್ವಾನ ವ್ಯಕ್ತಿಯೊಬ್ಬರಿಗೆ ಕಚ್ಚಿತ್ತು.
ಹೊರ್ಮುಸ್ಟಿ ತನ್ನ ಕಾರಿನ ಬಳಿ ನಿಂತು ಆಸ್ತಿ ವಿವಾದದ ಬಗ್ಗೆ ಸಂತ್ರಸ್ತ ಕೆರ್ಸಿ ಇರಾನಿಯೊಂದಿಗೆ ಜಗಳವಾಡುತ್ತಿದ್ದರು. ಈ ವೇಳೆ ಹೊರ್ಮುಸ್ಟಿಯ ಸಾಕುನಾಯಿ ಕಾರಿನೊಳಗೆ ಇದ್ದು ವಾಹನದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಕಾರಿನ ಬಾಗಿಲು ತೆರೆಯದಂತೆ ಸಂತ್ರಸ್ತ ಮನವಿ ಮಾಡಿದರೂ ಆರೋಪಿ ಹೊರ್ಮುಸ್ಟಿ ಅದನ್ನು ತೆರೆದಿದ್ದರಿಂದ ನಾಯಿ ಹೊರಬಂದು ಇರಾನಿ ಮೇಲೆ ನೇರವಾಗಿ ದಾಳಿ ಮಾಡಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಪರಿಣಾಮ ನಾಯಿ ಇರಾನಿಯವರ ಬಲ ಕಾಲಿಗೆ ದಾಳಿ ಮಾಡಿತ್ತು. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇಂತಹ ಪ್ರಕರಣಗಳಲ್ಲಿ, 'ಮೃದು ಧೋರಣೆ ಅನಗತ್ಯ' ಎಂದು ಗಿರ್ಗಾಂವ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎನ್ .ಎ. ಪಟೇಲ್ ತಾವು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.