ಸೇಫಾಗಿರಲೆಂದು ಲಾಕರ್ ಒಳಗಿಟ್ಟಿದ್ದ 2.15 ಲಕ್ಷ ರೂ. ಹಣ ಗೆದ್ದಲು ತಿಂದು ಹಾಳು
Monday, February 13, 2023
ರಾಜಸ್ಥಾನ: ಇಲ್ಲಿನ ಉದಯಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಲಾಕರ್‌ನಲ್ಲಿ ಗೆದ್ದಲು ಕಾಣಿಸಿಕೊಂಡಿದ್ದ ಪರಿಣಾಮ ಮಹಿಳೆಯೋರ್ವರು ಸೇಫಾಗಿರಲೆಂದು ಇಟ್ಟಿದ್ದ 2.15 ಲಕ್ಷ ರೂ ಮೌಲ್ಯದ ಕರೆನ್ಸಿ ನೋಟುಗಳು ಹಾನಿಗೀಡಾಗಿವೆ. ಹಣದ ಮಾಲಕಿ ಸುನೀತಾ ಮೆಹ್ರಾ ಬ್ಯಾಂಕ್‌ಗೆ ಭೇಟಿ ನೀಡಿದ ವೇಳೆ ಹಣವನ್ನು ಇಟ್ಟಿದ್ದ ಲಾಕರ್ ಅನ್ನು ಗಮನಿಸಿದ್ದರು. ಈ ವೇಳೆ ನೋಟುಗಳು ಸಂಪೂರ್ಣ ಹಾಳಾಗಿದ್ದನ್ನು ಕಂಡು ಸುನೀತಾ ಮೆಹ್ರಾ ಗಾಬರಿಗೊಳಗಾಗಿದ್ದಾರೆ. ಆದ್ದರಿಂದ ಅವರು ಬ್ಯಾಂಕ್ ಆಡಳಿತದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಟ್ಟೆಯ ಚೀಲದಲ್ಲಿ 2 ಲಕ್ಷ ರೂ. ಹಾಗೂ ಚೀಲದ ಹೊರಗೆ 15 ಸಾವಿರ ರೂ. ಹಣವನ್ನು ಸುನೀತಾ ಮೆಹ್ರಾ ಇಟ್ಟಿದ್ದರು. ಆದರೆ ಚೀಲದ ಹೊರಗಿದ್ದ 15 ಸಾವಿರ ರೂ. ನೋಟುಗಳನ್ನು ಗೆದ್ದಲು ತಿಂದಿರುವ ಬಗ್ಗೆ ಗಮನಿಸಿದ ಅವರು, ಬ್ಯಾಂಕ್ ಮ್ಯಾನೇಜರ್ ರೊಂದಿಗೆ ಮಾತನಾಡಿ ನೋಟುಗಳನ್ನು ಬದಲಾಯಿಸಿಕೊಂಡಿದ್ದರು. ಆದರೆ ಮನೆಗೆ ಹಿಂದಿರುಗಿ ಚೀಲ ತೆರೆದು ನೋಡಿದಾಗ ಅದರಲ್ಲಿದ್ದ 2 ಲಕ್ಷ ರೂ. ಕೂಡ ಗೆದ್ದಲಿನಿಂದ ಹಾಳಾಗಿರುವುದು ಪತ್ತೆಯಾಗಿದೆ.
ಈ ಘಟನೆ ಬೆಳಕಿಗೆ ಬಂದ ತಕ್ಷಣ ಬ್ಯಾಂಕ್ ವ್ಯವಸ್ಥಾಪಕರು ಲಾಕರ್ ಸುತ್ತಲೂ ಗೆದ್ದಲು ನಿವಾರಕವನ್ನು ಸಿಂಪಡಿಸಿ ಉಳಿದ ಲಾಕರ್ ಮಾಲೀಕರಿಗೆ ತಮ್ಮ ಲಾಕರ್ ತೆರೆಯುವಂತೆ ವಿನಂತಿಸಿದ್ದಾರೆ. ಹಿಂಭಾಗದ ಲಾಕರ್‌ನಲ್ಲಿ ಗೆದ್ದಲು ಪತ್ತೆಯಾದ ಬಳಿಕ, ಅನೇಕ ಗ್ರಾಹಕರು ಬ್ಯಾಂಕ್‌ನ ನಿರ್ವಹಣೆಯನ್ನು ಟೀಕಿಸಿದರು. ಬ್ಯಾಂಕ್ ನ ನಿರ್ಲಕ್ಷ್ಯದಿಂದ ಲಾಕರ್‌ಗಳ ಒಳಗಿನ ವಸ್ತುಗಳು ಹಾಳಾಗಿವೆ ಎಂದು ಜನರು ಆರೋಪಿಸಿದ್ದಾರೆ. ಗೆದ್ದಲು 20 ರಿಂದ 25 ಲಾಕರ್ ಗಳಲ್ಲಿ ನುಸುಳಿದೆ ಎನ್ನಲಾಗಿದೆ.
ಹಿರಿಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಯಾದವ್ ಪ್ರಕಾರ, ಹಾನಿಯ ಬಗ್ಗೆ ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗಿದ್ದು ಪರಿಸ್ಥಿತಿಯನ್ನು ಪರಿಹರಿಸಲು ಗ್ರಾಹಕರನ್ನು ಬ್ಯಾಂಕಿಗೆ ಕರೆಸಲಾಗಿದೆ.