![ಮಂಗಳೂರು: ನಕಲಿ ನೋಟು ಚಲಾವಣೆ - ಅಪರಾಧಿಗೆ 4ವರ್ಷ ಜೈಲು ವಾಸ ಮಂಗಳೂರು: ನಕಲಿ ನೋಟು ಚಲಾವಣೆ - ಅಪರಾಧಿಗೆ 4ವರ್ಷ ಜೈಲು ವಾಸ](https://blogger.googleusercontent.com/img/b/R29vZ2xl/AVvXsEjMV6T8k-z_t7BsvAaHUKk5oa-q8CUmajTVxZrjKwWajdkIUJveYNpZM0hNaT89S01xrl0sQJwpZGUZAezHoy3JFd9UnzFAp71vl36DdcJqyUziprrzdSg1Njt12qzW-JXqjT47Z8T_Y4wW/s1600/1676691407526677-0.png)
ಮಂಗಳೂರು: ನಕಲಿ ನೋಟು ಚಲಾವಣೆ - ಅಪರಾಧಿಗೆ 4ವರ್ಷ ಜೈಲು ವಾಸ
Saturday, February 18, 2023
ಮಂಗಳೂರು: ನಕಲಿ ನೋಟುಗಳನ್ನು ಚಲಾಯಿಸಿರುವ ಪ್ರಕರಣದ ಆರೋಪ ಮಂಗಳೂರಿನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 4 ವರ್ಷಗಳ ಸಜೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಬಂಟ್ವಾಳ ಇರಾ ಗ್ರಾಮದ ನಿವಾಸಿ ಅಬ್ಬಾಸ್ (53) ಶಿಕ್ಷೆಗೊಳಗಾದ ಅಪರಾಧಿ.
ಅಬ್ಬಾಸ್ 2019ರ ಅ. 24ರಂದು ನಗರದ ಫಳ್ನೀರ್ ನಲ್ಲಿರುವ ಜೆರಾಕ್ಸ್ ಶಾಪ್ ನಲ್ಲಿ 100 ರೂಪಾಯಿಯ 3 ಅಸಲಿ ನೋಟುಗಳನ್ನು ನೀಡಿ ಒಟ್ಟು 20 ಕಲರ್ ಜೆರಾಕ್ಸ್ ಮಾಡಿಸಿಕೊಂಡಿದ್ದ. ಅದೇ ವರ್ಷ ನ.5ರಂದು ಮುಲ್ಕಿ ಪೇಟೆಯ ಅಂಗಡಿಯಲ್ಲಿ ಒಂದು ನಕಲಿ ನೋಟು ನೀಡಿ 1 ಬಾಟಲಿ ನೀರು, ಮತ್ತೊಂದು ಅಂಗಡಿಯಲ್ಲಿ ಇನ್ನೊಂದು ನೋಟು ನೀಡಿ ಬಿಸ್ಕಿಟ್ ಖರೀದಿಸಿದ್ದ. ಹೊಟೇಲೊಂದರಲ್ಲಿ ಚಹಾ ಮತ್ತು ತಿಂಡಿ ಸೇವಿಸಿದ್ದ. ಅಲ್ಲದೆ ಮತ್ತೊಂದು ನೋಟನ್ನು ನೀಡಿ ಓರ್ವರಿಂದ ಚಿಲ್ಲರೆ ಪಡೆದುಕೊಂಡಿದ್ದ. ಹೀಗೆ 4 ನೋಟುಗಳನ್ನು ಬಳಸಿಕೊಂಡಿದ್ದ. ಉಳಿದ ನೋಟುಗಳು ಆತನ ಬಳಿಯೇ ಇತ್ತು. ಆದರೆ ಈತ ನೀಡಿದ್ದ ನೋಟಿನ ಬಗ್ಗೆ ಕೆಲವರು ಸಂದೇಹ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮುಲ್ಕಿ ಠಾಣಾ ಪಿಎಸ್‌ಐ ಶೀತಲ್ ಅಲಗೂರು, ಕಾನ್‌ಸ್ಟೆಬಲ್ ಸುರೇಶ್ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದರು.
ಇನ್‌ಸ್ಪೆಕ್ಟರ್ ಜಯರಾಮ ಡಿ.ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅಪರಾಧಿಗೆ ಐಪಿಸಿ ಸೆಕ್ಷನ್ 489 (ಸಿ)ಯಂತೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಎರಡು ತಿಂಗಳ ಸಜೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.