ಆಸ್ತಿಗಾಗಿ 80ರ ವೃದ್ಧೆಯನ್ನು ಮನೆ ಬಿಟ್ಟು ಓಡಿಸಿದ ಮೊಮ್ಮಗನಿಗೆ ತಕ್ಕ ಶಾಸ್ತಿ: ಅಜ್ಜಿ ಮರಳಿ ಗೂಡಿಗೆ
Wednesday, February 1, 2023
ತುಮಕೂರು: ಆಸ್ತಿಗಾಗಿ 80ವರ್ಷದ ಅಜ್ಜಿಯನ್ನೇ ಮನೆಯಿಂದ ಹೊರಹಾಕಿದದ ಪಾಪಿ ಮೊಮ್ಮಗನಿಗೆ ಉಪ ವಿಭಾಗಾಧಿಕಾರಿ ತಕ್ಕ ಶಾಸ್ತಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ 3ನೇ ವಾರ್ಡ್ ನಲ್ಲಿ ನಡೆದಿದೆ.
80ರ ವೃದ್ಧೆ ಕಾವಲಮ್ಮನ ಮನೆಯನ್ನೇ ಸ್ವಂತ ಮೊಮ್ಮಗ ಮಾರುತಿ ಆಕ್ರಮಿಸಿಕೊಂಡಿದ್ದನು. ಮನೆ ಸೇರಿದ ಬಳಿಕ ಅಜ್ಜಿಯನ್ನೇ ಹೊರದಬ್ಬಿದ್ದಾನೆ. ಕಾವಲಮ್ಮನ ಪುತ್ರಿ ಲಕ್ಷ್ಮಮ್ಮ 8 ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಳು. ಆ ಬಳಿಕ ಮಾರುತಿ ಮನೆಯನ್ನು ಆಕ್ರಮಿಸಿಕೊಂಡಿದ್ದ. ಅಜ್ಜಿಯನ್ನು ಹೊರದಬ್ಬಿರುವ ಆತ ಇದೀಗ ಮನೆ ಮಾರಾಟ ಮಾಡಲು ಹೊಂಚುಹಾಕುತ್ತಿದ್ದನು. ಇತ್ತ ಬೀದಿಗೆ ಬಿದ್ದ ಕಾವಲಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಕಾವಲಮ್ಮನ ಕಷ್ಟ ಆಲಿಸಿದ ಸಂಬಂಧಿಕರು ಮಾರುತಿಯ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿಯ ಎಸಿ ರಿಶಿ ಆನಂದ್, ಇದೀಗ ಪಾಪಿ ಮೊಮ್ಮಗನಿಂದ ವೃದ್ಧೆಗೆ ಮನೆ ಬಿಟ್ಟುಕೊಂಡುವಂತೆ ಆದೇಶ ಹೊರಡಿಸಿದ್ದಾರೆ.
ಎಸಿಯವರ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನು ಮನೆಯಿಂದ ಖಾಲಿ ಮಾಡಿಸಿದ್ದು ಕೊರಟಗೆರೆ ತಹಶೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ವೃದ್ಧೆ ಕಾವಲಮ್ಮನನ್ನು ಆಕೆಯ ಮನೆಗೆ ಸೇರಿಸಿದ್ದಾರೆ. ಎಸಿ ಆದೇಶಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.