ಡ್ರಗ್ ಮಾಫಿಯಾ ಕರಾಳ ಮುಖ ಬಿಚ್ಚಿಟ್ಟ 9ನೇ ತರಗತಿ ವಿದ್ಯಾರ್ಥಿನಿ: ಓರ್ವ ಯುವಕ ವಶಕ್ಕೆ
Tuesday, February 21, 2023
ಕೋಝಿಕ್ಕೋಡ್: 7ನೇ ತರಗತಿ ಕಲಿಯುತ್ತಿದ್ದ ವೇಳೆಯೇ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸೇವಿಸಿ ಡ್ರಗ್ ಮಾಫಿಯಾಕ್ಕೆ ಬಲಿಯಾಗಿ ಸಾಗಾಟದ ಕಾರ್ಯ ಮಾಡುತ್ತಿದ್ದ ಕೇರಳದ 9ನೇ ತರಗತಿಯ ವಿದ್ಯಾರ್ಥಿನಿ ಡ್ರಗ್ ಮಾಫಿಯಾದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾಳೆ. ಇದೀಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮಾದಕ ದ್ರವ್ಯ ಹ್ಯಾಶಿಶ್ ಆಯಿಲ್ ಮಾರಾಟ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಬಂಧಿತ ಯುವಕನ ಸ್ನೇಹಿತನ ಬಂಧನಕ್ಕಾಗಿ ಇದೀಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಈ ಇಬ್ಬರ ಬಗ್ಗೆ ಬಾಲಕಿ ಪೊಲೀಸರಿಗೆ ವಿವರ ನೀಡಿದ್ದಳು.
ಬಾಲಕಿಯ ಹೇಳಿಕೆ ಆಧರಿಸಿ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಝಿಕ್ಕೋಡ್ ಸಿಟಿ ನಾರ್ಕೋಟಿಕ್ಸ್ ಸೆಲ್ ಸಹಾಯಕ ಕಮಿಷನರ್ ಪ್ರಕಾಶನ್ ಪಡನ್ನಯಿಲ್ ತನಿಖೆಯ ನೇತೃತ್ವ ವಹಿಸಿದ್ದಾರೆ.
ಇನ್‌ಸ್ಟಾಗ್ರಾಂ ಗ್ರೂಪ್ ಮೂಲಕ ಡ್ರಗ್ ಮಾಫಿಯಾಕ್ಕೆ ಸಿಕ್ಕಿಬಿದ್ದಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಗೆಳೆಯನೊಬ್ಬ ಆಕೆಯನ್ನು ಆ ಗುಂಪಿಗೆ ಸೇರಿಸಿದ್ದ. 7ನೇ ತರಗತಿ ಮುಗಿದಾಗಿನಿಂದ ಗ್ಯಾಂಗ್‌ಗೆ ಕ್ಯಾರಿಯರ್ ಆಗಿದ್ದ ಆಕೆ ಶಾಲೆಯ ಸಮಯದ ನಂತರ ಈ ಕೆಲಸ ಮಾಡುತ್ತಿದ್ದಳು. ಸದ್ಯ ಈ ಪ್ರಕರಣ ಕೇರಳದಲ್ಲಿ ಮಾತ್ರವಲ್ಲದೇ ದೇಶದ ಎಲ್ಲ ಹೆತ್ತವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.