ಕೆಎಸ್ಸಾರ್ಟಿಸಿ ಬಸ್ಸು ಹರಿದು ದ್ವಿಚಕ್ರ ವಾಹನ ಸವಾರ ದುರ್ಮರಣ
Tuesday, February 28, 2023
ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ದಾರುಣವಾಗಿ ಸಾವಿಗೀಡಾದ ಘಟನೆ ಮಂಗಳವಾರ ಮಧ್ಯಾಹ್ನ ಕಾಸರಗೋಡು ಜಿಲ್ಲೆಯ ಎಂ.ಜಿ. ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ಸಂಭವಿಸಿದೆ.
ಮೊಗ್ರಾಲ್ ಪುತ್ತೂರು ಕಡವತ್ ಮೊಗರು ನಿವಾಸಿ ಮುಹಮ್ಮದ್ ಫಾಝಿಲ್ ತಬ್ಬಿರ್ (23) ಮೃತಪಟ್ಟ ಯುವಕ.
ಫಾಝಿಲ್ ತಬ್ಬಿರ್ ಮೊಗ್ರಾಲ್ ಪುತ್ತೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಂಗಳವಾರ ಮಧ್ಯಾಹ್ನ 12ಗಂಟೆ ಸುಮಾರಿಗೆ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಎಂ.ಜಿ. ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ಕೆಎಸ್ಆರ್ ಟಿಸಿ ಬಸ್ ಢಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ ನಿಂದ ರಸ್ತೆಗೆಸೆಯಲ್ಪಟ್ಟ ಅವರ ಮೇಲೆಯೇ ಬಸ್ಸಿನ ಹಿಂಬದಿ ಚಕ್ರ ಹರಿದಿದೆ.
ಗಂಭೀರವಾಗಿ ಗಾಯಗೊಂಡ ಫಾಝಿಲ್ ತಬ್ಬಿರ್ ರನ್ನು ತಕ್ಷಣ ನಗರದ ಸರಕಾರಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದರು. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಕಾರಣವಾದ ಕೆಎಸ್ಸಾರ್ಟಿಸಿ ಬಸ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.