ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋದ ಕಾರು ಡಿಕ್ಕಿಯಾಗಿ ಸರಣಿ ಅಪಘಾತ: ಇಬ್ಬರು ಮೃತ್ಯು, ನಾಲ್ವರಿಗೆ ಗಾಯ
Tuesday, February 7, 2023
ಬೆಂಗಳೂರು: ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪನವರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗುತ್ತಿದ್ದ ಕಾರು ಢಿಕ್ಕಿಯಾಗಿ ಸಂಭವಿಸಿರುವ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ
ಎಚ್‌ಬಿಆರ್ ಲೇಔಟ್ ನಿವಾಸಿ ಮಜೀದ್ ಖಾನ್ (36) ಮತ್ತು ಕೆ.ಜಿ.ಹಳ್ಳಿ ನಿವಾಸಿ ಅಯ್ಯಪ್ಪ (60) ಮೃತಪಟ್ಟ ದುರ್ದೈವಿಗಳು. ಇನ್ನಿತರ ವಾಹನ ಸವಾರರಾದ ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ ಹಾಗೂ ಶೇರ್ ಗಿಲಾನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧಿಸಿದಂತೆ ಇನೋವಾ ಕಾರು ಚಾಲಕ ಎಂ.ಮೋಹನ್ (48) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಸರಣಿ ಅಪಘಾತದಲ್ಲಿ ಟೊಯೋಟಾ, ಇಟಿಎಸ್ ಕಾರು, ಆಕ್ಟೋ ಕಾರು, ಪಲ್ಸರ್ ದ್ವಿಚಕ್ರ ವಾಹನ, ಎರಡು ಹೋಂಡ ಆಕ್ಟಿವಾ ದ್ವಿಚಕ್ರ ವಾಹನ ಸೇರಿ ಒಟ್ಟು 5 ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನೋವಾ ಕಾರು ಚಾಲಕ ಮೋಹನ್ ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೂರು ದ್ವಿಚಕ್ರ ವಾಹನ ಹಾಗೂ ಚತುಶ್ಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಹೋಂಡಾ ಆಕ್ಟಿವಾ ಹೋಂಡಾ ಚಲಾಯಿಸುತ್ತಿದ್ದ ಮಜೀದ್ ಖಾನ್ ಮತ್ತು ಪಲ್ಸರ್ ಬೈಕ್ ಹಿಂಬದಿ ಸವಾರ ಅಯ್ಯಪ್ಪ ಎಂಬವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಉಳಿದಂತೆ ಸವಾರರಾದ ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ ಹಾಗೂ ಶೇರ್ ಗಿಲಾನಿ ಕೂಡ ಗಾಯಗೊಂಡಿದ್ದರು. ಸಂಚಾರ ಪೊಲೀಸರು ಹಾಗೂ ಸ್ಥಳೀಯರು ತಕ್ಷಣ ಆರು ಮಂದಿ ಗಾಯಾಳುಗಳನ್ನು ಸಮೀಪದ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಮಜೀದ್ ಖಾನ್ ಮತ್ತು ಅಯ್ಯಪ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಉಳಿದ ನಾಲ್ವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಣಿ ಅಪಘಾತಕ್ಕೆ ಕಾರು ಚಾಲಕನ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರು ಮಾಲೀಕ ರಾಮು ಸುರೇಶ್ ಹಾಗೂ ಚಾಲಕನ ವಿರುದ್ಧ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರು ಯಲಹಂಕ ನಿವಾಸಿ ಹಾಗೂ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ರಾಮು ಸುರೇಶ್ ಮಾಲೀಕತ್ವದಲ್ಲಿದೆ. ರಾಮು ಸುರೇಶ್ ಪುತ್ರನಿಗೆ ಶಾಸಕ ಹರತಾಳು ಹಾಲಪ್ಪನವರ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ. ಈಕೆ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆದುಕೊಂಡು ಬರಲು ಚಾಲಕ ಮೋಹನ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ನೃಪತುಂಗ ರಸ್ತೆಯಲ್ಲಿ ಈ ದುರಂತ ನಡೆದಿದೆ.