ಅತಿ ಮಾತು ಅರ್‌ಜೆ ಅರ್ಹತೆಯಲ್ಲ: ಆಳ್ವಾಸ್‌ನಲ್ಲಿ ಆರ್‌ಜೆ ವಿವೇಕ್
ಅತಿ ಮಾತು ಅರ್‌ಜೆ ಅರ್ಹತೆಯಲ್ಲ: ಆಳ್ವಾಸ್‌ನಲ್ಲಿ ಆರ್‌ಜೆ ವಿವೇಕ್
ವಿದ್ಯಗಿರಿ: ಅತಿಯಾದ ಮಾತು ಆರ್‌ಜೆ (ರೇಡಿಯೊ ಉದ್ಘೋಷಕ) ಅರ್ಹತೆಯಲ್ಲ. ಅದಕ್ಕೆ ಬದಲು, ಮಾತಿನಲ್ಲಿ ವಿಷಯ, ಭಾಷೆಯ ಮೇಲಿನ ಹಿಡಿತ, ಸ್ಪಂದನೆ ಹಾಗೂ ವಿಷಯದ ಪ್ರಸ್ತುತಿ ಒಬ್ಬ ಉತ್ತಮ 'ಆರ್‌ಜೆ'ಯ ಲಕ್ಷಣ ಎಂದು ರೇಡಿಯೊ ಮಿರ್ಚಿ ಆರ್‌ಜೆ ವಿವೇಕ್ (ಆರ್‌ಜೆ ವಿಕ್ಕಿ) ಹೇಳಿದರು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮತ್ತು ಸಮೂಹ ಸಂವಹನ ವಿಭಾಗದ 'ಅಭಿವ್ಯಕ್ತಿ' ವೇದಿಕೆ ನಡೆಸಿಕೊಟ್ಟ ‘ರೇಡಿಯೊ ಅಂದು, ಇಂದು ಮತ್ತು ಮುಂದು’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾಧ್ಯಮದವರು, ಮಾಧ್ಯಮ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳ ಜೊತೆ, ವಿವಿಧ ಸಮುದಾಯಗಳ ಜೊತೆ, ಸ್ಥಳೀಯದಲ್ಲಿ ಸ್ಥಳೀಯ ಸಂಸ್ಕೃತಿಗಳ ಜೊತೆ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಒಡನಾಟ ಹೊಂದಬೇಕು. ಜನರ ನಾಡಿಮಿಡಿತ ತಿಳಿಯಬೇಕು. ಸಂಯಮದಿಂದ ಎಲ್ಲರೊಂದಿಗೂ ಸ್ಪಂದಿಸಬೇಕು ಎಂದ ಅವರು, ವಿಭಿನ್ನ ಅನುಭವಗಳನ್ನು ಹಂಚಿಕೊಂಡರು.
ರೇಡಿಯೊದ ಅನನ್ಯತೆ, ಎದುರಿಸುತ್ತಿರುವ ಸವಾಲುಗಳು, ಆರ್ಥಿಕ ನಿರ್ವಹಣೆ, ಆರು ತಿಂಗಳಿಗೊಮ್ಮೆ ಬದಲಾಗಬೇಕಾದ ನಿರೂಪಣಾ ಶೈಲಿ ಸೇರಿದಂತೆ ಕ್ಷೇತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಅದೇ ರೀತಿ, ಆಕಾಶವಾಣಿಯ ಜನಪ್ರಿಯತೆ ಅಳೆಯುವ RAM, CAR ಟ್ರ್ಯಾಕ್ ಮತ್ತಿತರ ಮಾನದಂಡ, ಜಾಹೀರಾತುದಾರರ ಸ್ಪಂದನೆ, ಡಿಜಿಟಲ್ ಮಾಧ್ಯಮದ ಬಳಕೆ ಕುರಿತು ತಿಳಿಸಿದರು.
ಆಕಾಶವಾಣಿ ಆರಂಭದ ದಿನಗಳು, ಬೆಳೆದುಬಂದ ಬಗೆ ಹಾಗೂ ಕೋವಿಡ್ ಸಂಕ್ರಮಣದ ಕಾಲಘಟ್ಟ ಹಾಗೂ ಈಗಿನ ಸಾಧ್ಯತೆಗಳು ಮತ್ತು ಭವಿಷ್ಯದ ಬಗ್ಗೆ ಅವರು ವಿಶ್ಲೇಷಿಸಿದರು.
ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಜೊತೆ ರೇಡಿಯೊದಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಗಳಿಗೆ ಸಾಕಷ್ಟು ಅವಕಾಶವಿದೆ. ಅದಕ್ಕೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ ಅಭಿಪ್ರಾಯಪಟ್ಟರು.
ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಅಭಿವ್ಯಕ್ತಿ ವೇದಿಕೆ ಸಹ ಸಂಯೋಜಕ ವೈಶಾಖ್ ಮಿಜಾರ್ ಇದ್ದರು. ವಿದ್ಯಾರ್ಥಿನಿ ಪವಿತ್ರಾ ಕುಂದಾಪುರ ನಿರೂಪಿಸಿ, ಉಮ್ಮರ್ ಫಾರೂಕ್ ವಂದಿಸಿದರು.