ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ದ.ಕ.ಜಿಲ್ಲೆಗೆ
Saturday, February 11, 2023
ಮಂಗಳೂರು: ಕೇಂದ್ರದ ಗೃಹ ಸಚಿವ ಅಮಿತ್ ಷಾ ಇಂದು ದ.ಕ.ಜಿಲ್ಲಾ ಪ್ರವಾಸದಲ್ಲಿದ್ದಾರೆ. ವಿಶೇಷ ವಿಮಾನದಲ್ಲಿ ಬರುವ ಅವರು ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.15ಕ್ಕೆ ವಿಮಾನದಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ 2.20ರ ವೇಳೆಗೆ ಹೆಲಿಕಾಪ್ಟರ್ ನಲ್ಲಿ ಈಶ್ವರಮಂಗಲದೆಡೆಗೆ ಪ್ರಯಾಣಿಸಲಿದ್ದಾರೆ.
ಮಧ್ಯಾಹ್ನ 2.45ರ ವೇಳೆಗೆ ಈಶ್ವರಮಂಗಲದ ಹೆಲಿಪ್ಯಾಡ್ ನಲ್ಲಿ ಬಂದಿಳಿಯುವ ಅವರು ರಸ್ತೆ ಮಾರ್ಗದ ಮುಖೇನ ಶ್ರೀ ಹನುಮಗಿರಿ ದೇವಸ್ಥಾನಕ್ಕೆ ತೆರಳಲಿದ್ದಾರೆ. ಅಲ್ಲಿ ಭಾರತ ಮಾತಾ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಧ್ಯಾಹ್ನ 3.20ಕ್ಕೆ ಮರಳಿ ಈಶ್ವರಮಂಗಲ ಹೆಲಿಪ್ಯಾಡ್ ಗೆ ತೆರಳಿ ಹೆಲಿಕಾಪ್ಟರ್ ಮೂಲಕ ಪುತ್ತೂರು ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣಕ್ಕೆ ತೆರಳಲಿದ್ದಾರೆ. ಅಲ್ಲಿ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅಲ್ಲಿಂದ ಪುತ್ತೂರು ಹೆಲಿಪ್ಯಾಡ್ ಗೆ ಮರಳಿ ಬಂದು ಹೆಲಿಕಾಪ್ಟರ್ ಮೂಲಕ ಸಂಜೆ 5.05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ಬಂದಿಳಿದವರು ಕೆಂಜಾರುವಿನಲ್ಲಿ ಕಾರ್ಯಕರ್ತರಿಗೆ ಶುಭ ಕೋರಿ 5.20ಕ್ಕೆ ಕೆಂಜಾರುವಿನಲ್ಲಿರುವ ಶ್ರೀ ದೇವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಯ ಸೆಮಿನಾರ್ ಸಭಾಂಗಣದಲ್ಲಿ ಆರು ಜಿಲ್ಲೆಗಳ ಬಿಜೆಪಿ ಮುಖಂಡರ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಆ ಬಳಿಕ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಅಮಿತ್ ಷಾ ದ.ಕ.ಜಿಲ್ಲೆಯ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಪುತ್ತೂರಿನಲ್ಲಿ 11 ಕೆಎಸ್ಆರ್ ಪಿ ಸೇರಿದಂತೆ 1000 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ವಿವಿಧ ಜಿಲ್ಲೆಗಳ ಎಸ್ಪಿ, ಡಿವೈಎಸ್ ಪಿಗಳು ಇನ್ ಸ್ಪೆಕ್ಟರ್ ಗಳನ್ನು ನಿಯೋಜನೆ ಮಾಡಲಾಗಿದೆ. ಮಂಗಳೂರಿನಲ್ಲೂ ಅಮಿತ್ ಷಾ ಬರುವ ಸ್ಥಳದ ಒಂದೆರಡು ಕಿ.ಮೀ. ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ.
ಮೊದಲು ನಿರ್ಧರಿಸಿದಂತೆ ಅಮಿತ್ ಷಾ ಅವರು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಬಳಿಕ ಕ್ಯಾಂಪ್ಕೋ ಫ್ಯಾಕ್ಟರಿ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದನ್ನು ರದ್ದು ಪಡಿಸಲಾಗಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ನೇರವಾಗಿ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಬದಲಿದ್ದಾರೆ. ಈ ಕಾರಣದಿಂದ 5.05 ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ, ಭದ್ರತೆ, ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂಜೆ 4ರಿಂದ ಅಮಿತ್ ಷಾ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ತನಕ ಮಂಗಳೂರು ವಿಮಾನ ನಿಲ್ದಾಣ ಹಾಗೂ ಕೆಂಜಾರು ಶ್ರೀದೇವಿ ಕಾಲೇಜು ವ್ಯಾಪ್ತಿಯ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ, ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲದೆ ವಾಹನ ಸಂಚಾರದಲ್ಲೂ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.
ಮಾರ್ಗ ಬದಲಾವಣೆ ವಿವರ
1 ಮುಲ್ಕಿಯಿಂದ ಮಂಗಳೂರು ವಿಮಾನ ನಿಲ್ದಾಣದೆಡೆಗೆ ಸಂಚರಿಸುವ ಎಲ್ಲಾ ವಾಹನಗಳು ಮುಲ್ಕಿ ವಿಜಯ ಸನ್ನಿಧಿಯಲ್ಲಿ ಎಡಕ್ಕೆ ತರಳಿ ಎಸ್.ಕೋಡಿ - ಕಿನ್ನಿಗೋಳಿ - ಕಟೀಲು - ಬಜಪ - ಕರಂಬಾರು ಮೂಲಕ ಸಂಚರಿಸುವುದು.
2 ರಾಷ್ಟ್ರೀಯ ಹೆದ್ದಾರಿ-66ರ ಕುದುರೆಮುಖ ಜಂಕ್ಷನ್ (ಕೆ.ಐ.ಒ.ಸಿ.ಎಲ್. ಜಂಕ್ಷನ್) ನಿಂದ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕುದುರೆಮುಖ ಜಂಕ್ಷನ್ (ಕೆ.ಐ.ಒ.ಸಿ.ಎಲ್. ಜಂಕ್ಷನ್) ನಲ್ಲಿ ಎಡಕ್ಕೆ ತಿರುಗಿ ತೋಕೂರು ರಸ್ತೆ - ಜೋಕಟ್ಟೆ - ಪೊರ್ಕೊಡಿ - ಕರಂಬಾರು ಮೂಲಕ ಸಂಚರಿಸುವುದು.
3 ಸುರತ್ಕಲ್, ಪಣಂಬೂರಿನಿಂದ ಬಜಪೆ ಕಡೆಗೆ ಹೋಗುವ ವಾಹನಗಳು ರಾಷ್ಟ್ರೀಯ ಹೆದ್ದಾರಿ-66 ರ ಜೋಕಟ್ಟೆ ಕ್ರಾಸ್‌ನಲ್ಲಿ ಎಡಕ್ಕೆ ಚಲಿಸಿ ಇಂಡಸ್ಟ್ರೀಯಲ್ ಏರಿಯಾ -ಜೋಕಟ್ಟೆ - ಪೊರ್ಕೋಡಿ, ಕರಂಬಾರು ಮೂಲಕ ಸಂಚರಿಸುವುದು.
4 ಮಂಗಳೂರು ಹಾಗೂ ಕೇರಳ ಕಡೆಯಿಂದ ಮಂಗಳೂರು ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ನಂತೂರು ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಬಿಕರ್ನಕಟ್ಟೆ ಕೈಕಂಬ - ವಾಮಂಜೂರು - ಗುರುಪುರ- ಕೈಕಂಬ - ಬಜಪ - ಕರಂಬಾರು ಮೂಲಕ ಸಂಚರಿಸುವುದು.
5 ಬಜಪೆ ಹಾಗೂ ಮಂಗಳೂರು ವಿಮಾನ ನಿಲ್ದಾಣ ಕಡೆಯಿಂದ ಮಂಗಳೂರು ನಗರ ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಈ ಮೇಲ್ಕಂಡ ಕ್ರ.ಸಂ 1 ರಿಂದ 4 ರ ಮಾರ್ಗವಾಗಿಯೇ ಪ್ರಯಾಣಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದೆ.