ಮಾದಕದ್ರವ್ಯ ಸೇವನೆ ಬಗ್ಗೆ ಆಕ್ಷೇಪವೆತ್ತಿದ ಲಿವಿಂಗ್ ರಿಲೇಷನ್ ಶಿಪ್ ಸಂಗಾತಿಯನ್ನು ಬೆಂಕಿಹಚ್ಚಿ ಕೊಂದ ಕೊಲೆಗಡುಕ ಅರೆಸ್ಟ್
Wednesday, February 22, 2023
ಹೊಸದಿಲ್ಲಿ: ಮಾದಕ ದ್ರವ್ಯ ಸೇವನೆ ವಿಚಾರದಲ್ಲಿ ನಡೆದ ವಾಗ್ವಾದದಲ್ಲಿ ವ್ಯಕ್ತಿಯೋರ್ವನು ತನ್ನ ಸಹ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ತನ್ನ 28 ವರ್ಷದ ಸಂಗಾತಿಯನ್ನೇ ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ವಾಯುವ್ಯ ದಿಲ್ಲಿಯ ಅಮನ್ ವಿಹಾರ್ ನಲ್ಲಿ ಸಂಭವಿಸಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಮನ್ ವಿಹಾರ್ ನಿವಾಸಿ ಮೋಹಿತ್ ಬಂಧಿತ ಆರೋಪಿ.
ಮೃತಪಟ್ಟ ಮಹಿಳೆಯನ್ನು ವಾಯುವ್ಯ ದಿಲ್ಲಿಯ ಬಲ್ವಿ ವಿಹಾರದ ನಿವಾಸಿ ಎಂದು ಗುರುತಿಸಲಾಗಿದೆ. ಈಕೆ ಪಾದರಕ್ಷೆ ತಯಾರಿಕೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪತಿಯಿಂದ ದೂರವಿದ್ದ ಈ ಯುವತಿ ಕಳೆದ 6 ವರ್ಷಗಳಿಂದ ಮೋಹಿತ್ ನೊಂದಿಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಳು. ಫೆ.10ರಂದು ರಾತ್ರಿ ಮೋಹಿತ್ ತನ್ನ ಸ್ನೇಹಿತನ ಮನೆಯಲ್ಲಿ ಮಾದಕ ದ್ರವ್ಯ ಸೇವಿಸುತ್ತಿರುವುದನ್ನು ಕಂಡು ಮಹಿಳೆ ಆತನೊಂದಿಗೆ ಜಗಳವಾಡಿದ್ದಳು.
ಇದರಿಂದ ಕುಪಿತಗೊಂಡ ಮೋಹಿತ್ ಆಕೆಯ ಮೇಲೆ ಟಾರ್ಪೈನ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.