ಬಗೆಹರಿಯದ ಕುಡಿಯುವ ನೀರಿನ ಸಮಸ್ಯೆ: ಗನ್ ತೋರಿಸಿ ಸರಕಾರಿ ನೌಕರರನ್ನು ಕೂಡಿ ಹಾಕಿ ಗ್ರಾಪಂ ಬೀಗ ಜಡಿದ ಯುವಕ
Wednesday, February 22, 2023
ತಿರುವನಂತಪುರಂ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ್ದರಿಂದ ಕುಪಿತಗೊಂಡ ಯುವಕನೋರ್ವನು ಗನ್ ತೋರಿಸಿ ಸರಕಾರಿ ನೌಕರರನ್ನು ಕೂಡಿ ಹಾಕಿ ಗ್ರಾಪಂ ಬೀಗ ಜಡಿದ ಘಟನೆ ಕೇರಳದ ವೆಂಗನೂರ್ ಗ್ರಾಮದಲ್ಲಿ ನಡೆದಿದೆ.
ಅಮರಾವಿಲಾ ಮೂಲದ ಮುರುಗನ್ (33) ಗನ್ ಪಾಯಿಂಟ್ ತೋರಿಸಿ ಸರಕಾರಿ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡ ಯುವಕ. ಈ ಗನ್‌ನೊಂದಿಗೆ ಗ್ರಾಪಂ ಕಚೇರಿಗೆ ಬಂದಿದ್ದಾನೆ. ಬಳಿಕ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವಾಗ್ವಾದ ನಡೆಸಿ ಅಲ್ಲಿದ್ದ ಎಲ್ಲಾ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ. ನಮಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ದೂರಿದ ಯುವಕ ಸಮಸ್ಯೆ ಬಗೆಹರಿಸದಿದ್ದರೆ ಫೈರಿಂಗ್ ಮಾಡುವುದಾಗಿ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಬಳಿಕ ಉದ್ಯೋಗಿಗಳನ್ನು ಕಚೇರಿ ಒಳಗೆ ಕೂಡಿ ಹಾಕಿ ಹೊರಗಿನಿಂದ ಬಾಗಿಲು ಹಾಕಿದ್ದಾನೆ.
ಫೆ.21ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮುರುಗನ್ ಗನ್ ಹಿಡಿದು ಕಚೇರಿಗೆ ಆಗಮಿಸಿದ್ದಾನೆ. ಕಾಲುವೆಯಿಂದ ಕುಡಿಯುವ ನೀರು ದೊರಕುತ್ತಿಲ್ಲ ಎಂಬುದು ಆತನ ದೂರು ಆಗಿತ್ತು. ಈತ ಗನ್ ಹಿಡಿದುಕೊಂಡಿದ್ದಲ್ಲದೆ, ನೀರನ್ನು ಬಿಡುಗಡೆ ಮಾಡದ ಪಂಚಾಯತ್ ಅನ್ನು ಮುಚ್ಚಿ ಎಂಬ ಬರಹ ಇರುವ ಭಿತ್ತಿ ಫಲಕದೊಂದಿಗೆ ಕಚೇರಿಗೆ ಆಗಮಿಸಿದ್ದನು.
ಈ ಬಗ್ಗೆ ಮುರುಗನ್ ಮಾತನಾಡಿ, ವೆಂಗನೂರು ಪಂಚಾಯತಿಗೆ ಕಾಲುವೆ ನೀರು ಬರದೇ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಳಿಕ ಮುರುಗನ್ ಗನ್ ಪಾಯಿಂಟ್ ತೋರಿಸಿ ಉದ್ಯೋಗಿಗಳನ್ನು ಕೂಡಿಹಾಕಿ ಪಂಚಾಯತ್ ಕಚೇರಿಯ ಗೇಟ್‌ಗೆ ಬೀಗ ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನಿಂದ ಬಂದೂಕನ್ನು ವಶಪಡಿಸಿಕೊಂಡು ಒತ್ತೆಯಾಳಾಗಿದ್ದ ನೌಕರರನ್ನು ಬಿಡಿಸಿದ್ದಾರೆ. ಬಳಿಕ ಮುರುಗನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.