ಬಾವಿಗೆ ಬಿದ್ದಿದ್ದ ಚಿರತೆಯನ್ನು ಬಾವಿಗಿಳಿದು ರಕ್ಷಿಸಿದ ಮಹಿಳಾ ಪಶುವೈದ್ಯೆ: ಬೋನಿನೊಳಗೆ ಕುಳಿತು ಸಾಹಸ ಮೆರೆದ ಡಾ.ಮೇಘನಾ
Tuesday, February 14, 2023
ಮಂಗಳೂರು: ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಮಹಿಳಾ ಪಶು ವೈದ್ಯಾಧಿಕಾರಿ ಬೋನಿನಲ್ಲಿಯೇ ಬಾವಿಗಿಳಿದು ಸಾಹಸ ಮೆರೆದು ರಕ್ಷಿಸಿದ ಘಟನೆ ಮಂಗಳೂರಿನ ಹೊರವಲಯದ ಕಟೀಲು ಸಮೀಪದ ನಿಡ್ಡೋಡಿಯಲ್ಲಿ ನಡೆದಿದೆ.
ಸುಮಾರು 1 ವರ್ಷ ಪ್ರಾಯದ ಈ ಚಿರತೆಯು ಬಾವಿಗೆ ಬಿದ್ದಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಬೋನಿನಲ್ಲಿ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ಫಲಕೊಟ್ಟಿಲ್ಲ. ಚಿರತೆಯು ಬಾವಿಯೊಳಗೆ ಒಂದು ಸಣ್ಣ ಗುಹೆ ರೀತಿಯ ಜಾಗದಲ್ಲಿ ಅವಿತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಪಶು ವೈದ್ಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಮುಂದಾಗಿದ್ದಾರೆ.
ಸ್ಥಳಕ್ಕೆ ಡಾ.ಯಶಸ್ವಿ ನಾರಾವಿ, ಡಾ.ಮೇಘನಾ ಪೆಮ್ಮಯ್ಯ, ಡಾ.ಪೃಥ್ವಿ, ಡಾ.ನಫೀಸಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಡಾ.ಮೇಘನಾ ಅರಿವಳಿಕೆ ಮದ್ದನ್ನು ಗನ್ ನಲ್ಲಿ ತುಂಬಿಸಿ, ಅರಣ್ಯ ಇಲಾಖೆ ಸಿದ್ಧಪಡಿಸಿದ ಬೋನಿನೊಳಗೆ ಕುಳಿತುಕೊಂಡು ಬೋನಿನ ಹಹಿತ ಬಾವಿಯೊಳಗೆ ಇಳಿದಿದ್ದಾರೆ. ಡಾ.ಮೇಘನಾ ಅವರು ಚಿರತೆಗೆ ಅರಿವಳಿಕೆಯನ್ನು ಗನ್ ಮೂಲಕ ಶೂಟ್ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಹಗ್ಗದ ಸಹಕಾರದಿಂದ ಬಾವಿಗಿಳಿದು ಚಿರತೆಯನ್ನು ಡಾ.ಮೇಘನಾ ಇದ್ದ ಬೋನಿನೊಳಗೆ ಹಾಕಿದ್ದಾರೆ. ಆ ಬಳಿಕ ಬೋನನ್ನು ನಿಧಾನವಾಗಿ ಮೇಲೆತ್ತಲಾಯಿತು. ಮೇಲೆತ್ತಿದ್ದ ಬಳಿಕ ಚಿರತೆಗೆ ಪ್ರಜ್ಞೆ ಬರುವ ಇಂಜೆಕ್ಷನ್ ನೀಡಿ ಪ್ರಜ್ಞೆ ಬರಿಸಲಾಯಿತು. ಅದರ ಆರೋಗ್ಯವನ್ನು ಪರೀಕ್ಷಿಸಿದ ಬಳಿಕ ಅದನ್ನು ಕಾಡಿಗೆ ಬಿಡಲಾಗಿದೆ.
ಬಾವಿಯೊಳಗೆ ಬೋನಿನೊಂದಿಗೆ ಇಳಿದು ಚಿರತೆಯನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಬೋನು ಇಳಿಯುವ ಸಂದರ್ಭದಲ್ಲಿ ಲೆಕ್ಕಾಚಾರ ತಪ್ಪಿದರೆ ಚಿರತೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೂ ಓರ್ವ ಮಹಿಳೆಯಾಗಿ ಡಾ.ಮೇಘನಾ ಶ್ಲಾಘನೀಯ ಕೆಲಸ ಮಾಡಿದ್ದಾರೆ.