ಮಗುವಿಗೆ ಜನ್ಮ ನೀಡಿದ ತೃತೀಯ ಲಿಂಗಿ ದಂಪತಿಗಳಿಗೆ ಎದುರಾಯ್ತು ಕಾನೂನು ತೊಡಕು: ಯಾವ ಹೋರಾಟಕ್ಕೂ ಸೈ ಎಂದ ಜಿಯಾ ಪೂವೆಲ್
Friday, February 10, 2023
ಕೊಚ್ಚಿ: ಬಹಳಷ್ಟು ತೊಂದರೆ, ಅಡಚಣೆಗಳನ್ನು ಎದುರಿಸಿ ಫೆ.8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇರಳ ಮೂಲದ ತೃತೀಯಲಿಂಗಿ ದಂಪತಿಗೆ ಮತ್ತೊಂದು ಅಡ್ಡಿ ಎದುರಾಗಿದೆ. ಅದೇನೆಂದರೆ, ಸರ್ಕಾರಿ ದಾಖಲೆಗಳಲ್ಲಿ ಮಗುವಿನ ತಂದೆ ಮತ್ತು ತಾಯಿ ಯಾರಾಗಬೇಕು ಎಂಬುದು.
ಈ ಸಮಸ್ಯೆಯನ್ನು ಬಗೆಹರಿಸಲು ಜಿಯಾ ಪೊವೆಲ್, ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೋಗ್ಯ ಸಂಸ್ಥೆಯ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಲಿದ್ದಾರೆ. ಮಗುವಿಗೆ ಜನ್ಮ ನೀಡಿರುವ ಜಹಾದ್ ಫಾಜಿಲ್ ಅವರನ್ನು ತಂದೆಯಾಗಿಯೂ ಹಾಯ ತನ್ನನ್ನು ತಾಯಿಯನ್ನಾಗಿ ಸೇರಿಸಲು ಜಿಯಾ ಕೋರಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದಿಂದ ಕೊಡುವ ತೃತೀಯಲಿಂಗಿ ಗುರುತಿನ ಚೀಟಿಯನ್ನು ನಾವಿಬ್ಬರೂ ಹೊಂದಿದ್ದೇನೆ. ಜಹಾದ್ ಫಾಝಿಲ್ ಮಗುವಿಗೆ ಜನ್ಮ ನೀಡಿರಬಹುದು. ಆದರೆ ಆತನೇ ತಂದೆಯಾಗಿರಬೇಕು. ಅದು ನಮ್ಮಿಬ್ಬರ ಆಸೆಯು ಹೌದು. ಉಳಿವಿಗಾಗಿ ಹೋರಾಟ ಎಂಬಂತೆ ನಾವು ಪ್ರತಿ ಬಾಗಿಲು ಬಡಿಯಲು ತಯಾರಿದ್ದೇವೆ. ಅಗತ್ಯಬಿದ್ದರೆ ಕಾನೂನು ಹೋರಾಟ ಸಿದ್ಧರಿದ್ದೇವೆ ಎಂದು ಜಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಗು ಜನಿಸಿದ ಬಳಿಕ ಸಿಹಿ ಕೊಡಲು ಹೋದ ವೇಳೆ ಮೆಡಿಕಲ್ ಕಾಲೇಜು ಅಧೀಕ್ಷಕರಿಗೆ ನಾವು ಮೊಟ್ಟ ಮೊದಲು ಮಾಡಿದ ಮನವಿಯೇನೆಂದರೆ, ದಾಖಲೆಗಳಲ್ಲಿ ಜಹಾದ್‌ನನ್ನು ತಂದೆ ಎಂದು ಸೇರಿಸಬೇಕೆನ್ನುವುದು. ಆಸ್ಪತ್ರೆಯ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರು ಈ ವಿಷಯದಲ್ಲೂ ನಮಗೆ ಬೆಂಬಲ ನೀಡುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಜಿಯಾ ತಿಳಿಸಿದರು.
ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹಾದ್ ಹಾಗೂ ಗಂಡಾಗಿ ಹುಟ್ಟಿ ಹೆಣ್ಣಾಗಿಯೇ ಬದುಕು ನಡೆಸುತ್ತಿರುವ ಜಿಯಾ, ಬುಧವಾರ ಬೆಳಗ್ಗೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ತಂದೆ - ತಾಯಿಯಾಗಿದ್ದಾರೆ. ಅವರಿಬ್ಬರೂ ತೃತೀಯಲಿಂಗಿಗಳ ಪಟ್ಟಿಯಲ್ಲಿದ್ದರೂ, ಸಂಪೂರ್ಣವಾಗಿ ಜೈವಿಕ ಪರಿವರ್ತನೆಗೆ ಒಳಗಾಗಿರಲಿಲ್ಲ. ಸದ್ಯ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ.
ಅಂದಹಾಗೆ ಜಿಯಾ ಪೊವೆಲ್ ಖ್ಯಾತ ಡಾನ್ಸರ್. ಕೇರಳದಲ್ಲಿ ಇವರು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ತಮ್ಮ ಜೀವನ ಸಂಗಾತಿ ಜಹಾದ್ ಫಾಜಿಲ್ ರೊಂದಿಗೆ ಮಗು ಹೊಂದುವುದರೊಂದಿಗೆ ಕೇರಳದಲ್ಲಿ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ.