ಐಫೋನ್ ಆಸೆಗೆ ಕೊರಿಯರ್ ಬಾಯ್ ಯನ್ನೇ ಕೊಲೆಗೈದು, ಸುಟ್ಟು ಹಾಕಿದ ಕಿರಾತಕ ಅರೆಸ್ಟ್
Monday, February 20, 2023
ಹಾಸನ: ಐಫೋನ್ ಆಸೆಗಾಗಿ 20ರ ಯುವಕನೋರ್ವನು ಕೊರಿಯರ್ ಬಾಯ್ ನನ್ನು ಬರ್ಬರವಾಗಿ ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ.
ಹೇಮಂತ್ ನಾಯಕ್ (23) ಕೊಲೆಯಾದ ಕೊರಿಯರ್ ಬಾಯ್. ಹೇಮಂತ್ ದತ್ತ (20) ಹತ್ಯೆಗೈದಿರುವ ಆರೋಪಿ.
ಅರಸೀಕೆರೆಯ ಹಳೆಕಲ್ಲನಾಯಕನಹಳ್ಳಿ ಗ್ರಾಮದ ನಿವಾಸಿ ಹೇಮಂತ್ ದತ್ತ ಕೂಡ ಕೊರಿಯರ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆರೋಪಿ ಫೆ.7 ರಂದು ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಈ ಐಫೋನ್ ಡೆಲಿವರಿಗೆಂದು ಫೆಬ್ರವರಿ 10 ರಂದು ಹೇಮಂತ್ ದತ್ತ ಮನೆಗೆ ಹೇಮಂತ್ ನಾಯಕ್ ಹೋಗಿದ್ದ. ಆಗ ತನ್ನ ಬಳಿ ಅಷ್ಟೊಂದು ಹಣವಿಲ್ಲ ಆದರೆ ಬಾಕ್ಸ್ ಓಪನ್ ಮಾಡು ಎಂದು ಕೊರಿಯರ್ ಬಾಯ್ ನಲ್ಲಿ ಹೇಳಿದ್ದಾನೆ.
ಆಗ ಹೇಮಂತ್ ನಾಯಕ್ ಹಣ ನೀಡದೆ ಬಾಕ್ಸ್ ಓಪನ್ ಮಾಡಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ಹೇಮಂತ್ ದತ್ತ ಕೊರಿಯರ್ ಬಾಯ್ ಹೇಮಂತ್ ನಾಯಕನನ್ನು ಮನೆ ಒಳಗೆ ಕರೆದು, ಸ್ನೇಹಿತ ಹಣ ತರುತ್ತಿದ್ದಾನೆ ಸ್ವಲ್ಪ ಹೊತ್ತು ಕುಳಿತುಕೋ ಎಂದು ಹೇಳಿದ್ದಾನೆ. ಅದರಂತೆ ಮನೆ ಒಳಗೆ ಬಂದು ಹೇಮಂತ್ ನಾಯಕ್ ಮೊಬೈಲ್ ನೋಡುತ್ತಾ ಕುಳಿತಿದ್ದಾನೆ. ಈ ವೇಳೆ ಹಿಂಬಂದಿಯಿಂದ ಬಂದ ಆರೋಪಿ ಹೇಮಂತ ದತ್ತ ಚಾಕುವಿನಿಂದ ಇರಿದು ಹೇಮಂತ್ ನಾಯಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಅಲ್ಲದೆ ಮೃತದೇಹವನ್ನು ಗೋಣಿಚೀಲದಲ್ಲಿ ಸುತ್ತಿ ಮಾಡಿ, ನಾಲ್ಕು ದಿನಗಳ ಕಾಲ ಮನೆಯಲ್ಲಿಟ್ಟುಕೊಂಡಿದ್ದ. ಆ ಬಳಿಕ ಆರೋಪಿ ಹೇಮಂತ್ ದತ್ತ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಮೃತದೇಹವನ್ನು ಹೊತ್ತೊಯ್ದು ಅರಸೀಕೆರೆ ನಗರದ ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾನೆ.
ರಾತ್ರಿ ವೇಳೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿ ರಾತ್ರಿ ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.