ಕಂಪೆನಿಗೆ ಶ್ರಮ ವಹಿಸಿ ದುಡಿದ ಉದ್ಯೋಗಿಗಳಿಗೆ ಗುಜಾರಾತ್ ಟೆಕ್ ಕಂಪೆನಿಯಿಂದ ದುಬಾರಿ ಬೆಲೆಯ ಕಾರು ಗಿಫ್ಟ್
Thursday, February 2, 2023
ನವದೆಹಲಿ: ಗೂಗಲ್, ಅಮೆಜಾನ್, ಟ್ವಿಟರ್‌ನಂತಹ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಈ ಕಾಲದಲ್ಲಿ ಗುಜರಾತಿನ ಅಹಮದಾಬಾದ್ ಮೂಲದ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರೀಮಿಯಂ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. 8ವರ್ಷಗಳ ಹಿಂದೆ ಆರಂಭವಾಗಿರುವ ಈ ಕಂಪೆನಿ, ಇಂದು ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದೆ.
ತ್ರಿಧ್ಯ ಟೆಕ್ ಲಿಮಿಟೆಡ್ ಎಂಬ ಈ ಕಂಪೆನಿ ಅಹಮದಾಬಾದ್‌ನಲ್ಲಿದೆ. ಇದೀಗ ಈ ಕಂಪೆನಿಯ ಏಳಿಗೆಗೆ ದುಡಿದ ಉದ್ಯೋಗಿಗಳಿಗೆ ಟೊಯೋಟಾ ಗ್ಲಾಂಜಾ ಕಾರುಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಅವರ ಶ್ರಮವನ್ನು ಗೌರವಿಸಿದೆ.
ಈ ಬಗ್ಗೆ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಮರಂದ್ ಮಾತನಾಡಿ, ಕಂಪೆನಿಯು ಆರಂಭವಾದ ಸಂದರ್ಭದಲ್ಲೇ ಈ ಉದ್ಯೋಗಿಗಳು ಕೆಲಸಕ್ಕೆ ಸೇರಿದರು. ಎಲ್ಲರೂ ತಮ್ಮ ಸ್ಥಿರವಾದ ಕೆಲಸವನ್ನು ತೊರೆದು, ಕಂಪನಿಯನ್ನು ಯಶಸ್ವಿಗೊಳಿಸಲು ತುಂಬಾ ಶ್ರಮಿಸಿದರು ಎಂದಿದ್ದಾರೆ. ಅಲ್ಲದೆ, ಇತರೆ ಉದ್ಯೋಗಿಗಳಿಗೂ ಕಾರು ನೀಡಲು ಮುಂದಾಗಿದ್ದಾರೆ.
ರಮೇಶ್ ಮರಂದ್ ಅವರ ಕಂಪನಿಗೆ ಏಷ್ಯಾ, ಯೂರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಗ್ರಾಹಕರನ್ನು ಹೊಂದಿದ್ದಾರೆ. ಇವರ ಕಂಪೆನಿ, ಹೆಲ್ತ್‌ಕೇರ್, ಇನ್ಸುರೆನ್ಸ್, ಚಿಲ್ಲರೆ ವ್ಯಾಪಾರ, ಇಂಧನ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಸಾಫ್ಟ್‌ವೇರ್ ಡೆವೆಲಪ್ ಮಾಡಿಕೊಡುತ್ತದೆ. ಅಲ್ಲದೆ, ಟೆಕ್ನಾಲಜಿ ಬೆಂಬಲವನ್ನು ನೀಡುತ್ತದೆ.
ರಮೇಶ್ ಮರಂದ್ ತ್ರಿಧ್ಯ ಇನ್ಫೋಟೆಕ್ ಕಂಪೆನಿಯ ಸಿಇಒ ಮತ್ತು ಐಟಿ ನಿರ್ದೇಶಕ. ಅವರಿಗೆ 12 ವರ್ಷಗಳ ಬಿಸಿನೆಸ್ ಡೆವಲಪ್‌ಮೆಂಟ್ ಮತ್ತು ಮಾರ್ಕೆಟಿಂಗ್ ಅನುಭವ ಇದೆ. ರಮೇಶ್ ಮರಂದ್ ಯುಕೆ ಮೂಲದ ಸಾಫ್ಟ್‌ವೇರ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಕಂಪನಿಯ ಪಾಲುದಾರರಾಗಿದ್ದಾರೆ. ಲಿಂಕ್‌ಡಿನ್‌ನಲ್ಲಿ ಸ್ಟಾರ್ ಆಗಿರುವ ರಮೇಶ್ ಮರಂದ್ ಅವರು ಸುಮಾರು 30 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.