-->
ಧಣಿ - ಒಕ್ಕಲು ಮಗನ ಆಪ್ತಕಥಾನಕ 'ಕೊರಮ್ಮ'

ಧಣಿ - ಒಕ್ಕಲು ಮಗನ ಆಪ್ತಕಥಾನಕ 'ಕೊರಮ್ಮ'

( ಸಾಮಜಿಕ ಜಾಲತಾಣದಲ್ಲಿ ಪ್ರಕಟವಾದ ಬರಹ)

*© ವಿಶ್ವನಾಥ ಪಂಜಿಮೊಗರು*




ಇಂದು ಕರಾವಳಿ ಎಂದು ಕರೆಯಲ್ಪಡುವ ತುಳುನಾಡಿನಲ್ಲಿ ಅದೆಷ್ಟೋ ಗುತ್ತು ಬಾರಿಕೆ ಮನೆತನಗಳು ಆಗಿ ಹೋಗಿದೆ. ಇಂದಿಗೂ ಗುತ್ತು ಬಾರಿಕೆಗಳ ಕುರುಹುಗಳು ಅಲ್ಲಲ್ಲಿ ನಮಗೆ ಕಾಣ ಸಿಗುತ್ತಿದೆ. ಇಲ್ಲಿ ಧಣಿ ಹಾಗೂ ಒಕ್ಕಲು ಮಕ್ಕಳ ನಡುವೆ ಮೇಲು - ಕೀಳೆಂಬ ತಾರತಮ್ಯದ ಗೆರೆಯೊಂದು ಮುಖಾಮುಖಿ ಆಗುತ್ತಲೇ ಇರುತ್ತದೆ. ಇದರ ನಡುವೆಯೇ  ಕರುಳು ಬಳ್ಳಿಯ ಬಾಂಧವ್ಯವನ್ನು ಮೀರಿದ ಆಪ್ತ ಸಂಬಂಧವೊಂದು ಈ ಗುತ್ತುಮನೆಗಳ ಗವ್ವೆನ್ನುವ ಬೃಹತ್ ಕೋಣೆಗಳೊಳಗೆ ಅಡಗಿ ಮರೆಯಾಗುತ್ತದೆ. ಅಂತಹ ಧಣಿ - ಒಕ್ಕಲು ಮಗನ ಆಪ್ತ ಕಥಾನಕವೇ 'ಕೊರಮ್ಮ' ಎಂಬ ತುಳು ಸಿನಿಮಾ. 


ನಟ, ನಿರ್ದೇಶಕ ಶಿವಧ್ವಜ್ ಶೆಟ್ಟಿಯವರು ನಿರ್ದೇಶನದ ಕೊರಮ್ಮ ಸಿನಿಮಾದ ಪ್ರೀಮಿಯರ್ ಶೋ ನಿನ್ನೆ ಪ್ರದರ್ಶನಗೊಂಡಿತು. ಈ ಸಿನಿಮಾ 80ರ ದಶಕದ ಕಥಾಹಂದರವನ್ನು ಒಳಗೊಂಡಿದೆ. ಧಣಿ ಮಂಜಯ್ಯ ಹೆಗ್ಡೆ ಹಾಗೂ ಒಕ್ಕಲು ಮಗ ಕೊರಮ್ಮನ ಆಪ್ತ ಬಾಂಧವ್ಯದ ಕಥಾನಕದಲ್ಲಿ ಕೊನೆಯವರೆಗೂ ನಮ್ಮ ಕಿವಿಯಲ್ಲಿ ಅನುರಣಿಸುವುದು 'ಉಳ್ಳಾಯ' ಹಾಗೂ 'ಉಳ್ಳಾಳ್ತಿ' ಎಂಬ ಆಪ್ತ ಕರೆ. ತಳ ಸಮುದಾಯದ ಅನಾಥ ಕೊರಮ್ಮ ಧಣಿ ಮಂಜಯ್ಯ ಹೆಗ್ಡೆ ಮನೆ ಸೇರುವಾಗ ಕೇವಲ ಐದು ವರ್ಷ. ಆದ್ದರಿಂದ ಅನ್ನ, ಇರಲೊಂದು ಕೊಟ್ಯ ಮಾಡಿಕೊಟ್ಟು ಆಶ್ರಯ ನೀಡಿದ ಧಣಿ ಮಂಜಯ್ಯ ಹೆಗ್ಡೆಯವರು ಕೊರಮ್ಮನ ಪಾಲಿಗೆ  ಯಾವತ್ತೂ ಉಳ್ಳಾಯನೇ. ಮನೆಯೊಡತಿಗೆ ಕೊರಮ್ಮನ ಬಗ್ಗೆ ಅನುಕಂಪವಿದ್ದರೂ, ಅವರ ಪುತ್ರನ ಉಪೇಕ್ಷೆಯೇ ಆತನ ಜೀವವನ್ನೇ ಕಸಿದುಕೊಳ್ಳುವಂತೆ ಮಾಡುತ್ತದೆ. ಇದುವೇ ಈ ಸಿನಿಮಾದ ಸ್ಥೂಲ ಕಥೆ

ತುಳುನಾಡಿನಲ್ಲಿ ತಳ ಸಮುದಾಯದ ಮಂದಿ ಮೇಲ್ವರ್ಗದ ಕೆಲ ಸಮುದಾಯದವರನ್ನು ಜಾತಿ ಶ್ರೇಣಿಗನುಗುಣವಾಗಿ ಉಳ್ಳಾಯ - ಉಳ್ಳಾಲ್ತಿ, ದೊಕ್ಕುಲು - ದೆತ್ತಿ, ಬೈದುಲು - ಬೈದ್ಯೆತಿ ಎಂದು ಸಂಬೋಧಿಸುತ್ತಾರೆ. ಇವುಗಳಲ್ಲಿ ಉಳ್ಳಾಯ ಹಾಗೂ ಉಳ್ಳಾಳ್ತಿ ಪದಗಳನ್ನು ತುಳುವರು ಸಾಕ್ಷಾತ್ ಶಿವ - ಪಾರ್ವತಿಯರನ್ನು ಮಾತಾ - ಪಿತೃಗಳ ವಿಶೇಷಣವೆಂಬಂತೆ ಸಂಬೋಧಿಸುತ್ತಾರೆ. ತಳಸಮುದಾಯದ ಮಂದಿಗೆ ಉಳ್ಳವರ, ಮೇಲ್ವರ್ಗದವರ ಮನೆಯೊಳಗೆ ಬಿಡಿ ಅವರ ಮನೆಯ ಮೇಲ್ಛಾವಣಿಯಡಿಗೂ ಬರಲು ಅವಕಾಶವಿಲ್ಲ. ಆದ್ದರಿಂದ ಅವರಿಗೆ ದೇವಸ್ಥಾನದೊಳಗೆ ಎಲ್ಲಿಯ ಪ್ರವೇಶ. ಆದ್ದರಿಂದ ಅವರು ಎಂದೂ ಗುಡಿಯೊಳಗಿನ ಉಳ್ಳಾಯ - ಉಳ್ಳಾಳ್ತಿಯರನ್ನು ನೋಡಲೇ ಇಲ್ಲ. ಅವರಿಗೆ ಯಾವತ್ತಿದ್ದರೂ ಅನ್ನ - ಆಶ್ರಯ ಕೊಟ್ಟ ಧಣಿಯೇ ಉಳ್ಳಾಯ. ಆತನ ಮಡದಿಯೇ ಉಳ್ಳಾಲ್ತಿ. ಅದೇ ಕಾರಣದಿಂದಲೇ ಕೊರಮ್ಮ ಸಿನಿಮಾದಲ್ಲೂ ಈ ಎರಡು ಪದಗಳು ಧ್ವನಿಪೂರ್ಣವಾಗಿ ಮೂಡಿ ಬಂದಿದೆ. 'ಉಳ್ಳಾಯ ತನ್ನ ಪಾಲಿನ ದೇವರು' ಎಂದು ಪದೇಪದೇ ಹೇಳುವ ಕೊರಮ್ಮನ ಮಾತು ಇದೇ ವಿಚಾರದಿಂದಲೇ ಗಟ್ಟಿ ನೆಲೆಯಲ್ಲಿ ಕಂಡು ಬರುತ್ತದೆ.

ಕೊರಮ್ಮ ತನ್ನ ಉಳ್ಳಾಯನ ಕಷ್ಟ - ಸುಖಗಳಲ್ಲಿ ಸದಾ ಭಾಗಿ. ಆತನ ಜೀವನವೇನಿದ್ದರೂ ಸದಾ ಉಳ್ಳಾಯನಿಗೆ ಮೀಸಲು. ಆತನಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧ. ಹಾಗಾಗಿಯೇ ಆತ ಉಳ್ಳಾಯನ ಕೆಮ್ಮು ಶಮನಕ್ಕಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಮಲೆಯೇರಿ ಮದ್ದಿನ ಬೇರು ತರುತ್ತಾನೆ‌. ಮಂಜಯ್ಯ ಹೆಗ್ಡೆಯವರು ಕೆಮ್ಮು ಹೆಚ್ಚಾಗಿ ಮಲಗಿದ್ದಾಗ ಆತ ಮನೆಯಂಗಳದಿಂದ ಕದಲುವುದಿಲ್ಲ‌. ಅವರು ಮೃತಪಟ್ಟಾಗ ಅಕ್ಷರಶಃ ಹುಚ್ಚನಾಗುತ್ತಾನೆ. ಅವರು ಮಡಿದ ಬಳಿಕವೂ ಅವರ 'ಕೊರಮ್ಮ' ಎಂಬ ಕರೆ ಆತನಿಗೆ ಪದೇಪದೇ ಕೇಳುತ್ತಲೇ ಇರುತ್ತದೆ. ಇದು ಆತನ ಪ್ರೀತಿಗೆ ಸಾಕ್ಷಿ. ಮಂಜಯ್ಯ ಹೆಗ್ಡೆಯವರಿಗೂ ಕೊರಮ್ಮನ ಮೇಲೆ ಅಷ್ಟೇ ಪ್ರೀತಿ. ಅವರೊಳಗೆ ಕರುಳ ಸಂಬಂಧವನ್ನು ಮೀರಿದ ಬಾಂಧವ್ಯವಿರುತ್ತದೆ‌. ಮನೆಯೊಡತಿ ದೇವಕಿಗೂ ಕೊರಮ್ಮನ ಮೇಲಿನ ಅಕ್ಕರೆ ಎಷ್ಟೆಂದು ಆಕೆ ಬಡಿಸುವ ಅನ್ನದಿಂದ, ಕೊರಮ್ಮನನ್ನು 'ಕೆಲಸ ಕಂಡು'ವೆಂದು ದೂಷಿಸಿದ ಮಗನ ಕಪಾಳಕ್ಕೆ ಬಾರಿಸುವ ದೃಶ್ಯದಿಂದ ಶ್ರುತವಾಗುತ್ತದೆ.

ಇಲ್ಲಿ ಉಳ್ಳಾಯ ಮಂಜಯ್ಯ ಹೆಗ್ಡೆಯ ಪಾತ್ರಕ್ಕಿದ್ದಷ್ಟೇ ಮಹತ್ವ ಉಳ್ಳಾಲ್ತಿ ದೇವಕಿ ಪಾತ್ರಕ್ಕೂ ಇದೆ. ಆಕೆ ಪತಿಯ ಯಾವ ಕಾರ್ಯವನ್ನು ಎದುರು ನಿಂತು ವಿರೋಧಿಸಿದವಳಲ್ಲ‌. ಪತಿ ಮೃಗ ಬೇಟೆಗೆಂದು ಹೇಳಿ ರಾತ್ರಿ ಮೈಗೆ ಗಂಧದೆಣ್ಣೆ ಪೂಸಿ ಹೆಣ್ಣ ಬೇಟೆಗೆಂದು ಹೊರಡುವಾಗಲೂ ನೇರವಾಗಿ ಪ್ರತಿಭಟಿಸದೆ ಸ್ವಗತ ಸಂಭಾಷಣೆಯಲ್ಲಿಯೇ ಪತಿಯ ಕಾರ್ಯವನ್ನು ಖಂಡಿಸಿದವಳು. ಆದರೂ ಮೌನವಾಗಿಯೇ ಪತಿಯ ಹೆಣ್ಣ ಚಪಲವನ್ನು ಆಳು ಮಗ ಕೊರಮ್ಮನ ಮೂಲಕ ಕಡಿವಾಣ ಹಾಕಿದವಳು. 

ಸಣ್ಣ ಪಾತ್ರವಾದರೂ ವೇಶ್ಯೆ ನೀಲಿಯ ಪಾತ್ರವೂ ತುಳುನಾಡಿನ ದೃಷ್ಟಿಯಿಂದ ಮಹತ್ವದ್ದು. ಮಂಜಯ್ಯ ಹೆಗ್ಡೆಯವರು ಕೊರಮ್ಮನ ಮಾತಿಗೆ ಕಟ್ಟು ಬಿದ್ದು 'ಇನ್ನು ತಾನು ನಿನ್ನಲ್ಲಿಗೆ ಬರುವುದಿಲ್ಲ. ನಿನಗೇನು ಬೇಕು' ಎಂದು ಕೇಳು ಎಂದಾಗ, ಆಕೆ ಹೇಳುವ 'ತಾನು ಬೆಲೆವೆಣ್ಣಾಗಿ ಹಳವರಿಗೆ ಮೈಮಾರುವವಳು. ಆದರೆ ನಿಮಗೆ ಮಾತ್ರವೇ ಮೈ ಮಾತ್ರವಲ್ಲ ಮನಸ್ಸನ್ನು ನೀಡಿದ್ದೇನೆ' ಎಂದು ಆರ್ತಳಾಗಿ ಹೇಳುವಾಗ ಆಕೆಯ ಮೇಲೆ ಗೌರವದ ಸಣ್ಣ ಎಳೆ ಹಾದು ಹೋಗುತ್ತದೆ. ನೀಲಿಯ ಪಾತ್ರ ತುಳುನಾಡಿನ ಹಳೆಯ ತಲೆಮಾರಿನ ಪುರುಷರ ದೇಹಕಾಮನೆಯನ್ನು ತೀರಿಸಿದ 'ವೇಶ್ಯೆ'ಯರ ಹಾಗೂ 'ಇಟ್ಟುಕೊಂಡವಳು' ಎಂದೇ ಅಳಿದು ಹೋಗಿರುವ ಅನೇಕ ಜೀವಂತ ಪಾತ್ರಗಳನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ‌.

ಉಳ್ಳಾಯ ಮಂಜಯ್ಯ ಹೆಗ್ಡೆಯವರು ಸಾಕಷ್ಟು ಆಸ್ತಿ - ಅಂತಸ್ತು ಇದ್ದವರಾದರೂ ತಮ್ಮ ಮನೆಗೊಂದು ಸರಿಯಾದ ದಾರಿ ಹಾಗೂ ತನ್ನ ಮಗನನ್ನು ತಮ್ಮ ದಾರಿಗೆ ತರುವಲ್ಲಿ ಮಾತ್ರ ಸೋತವರು‌. ಇವೆರಡೂ ಸಾಧ್ಯವಾಗುವುದು ಅವರು ಇಹಲೋಕ ತ್ಯಜಿಸಿದಾಗಲೇ. ಹೀಗೆ ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳೂ ತುಳುನಾಡಿನ ಗತಕಾಲದಲ್ಲಿ ಬಾಳಿ ಬದುಕಿದವರನ್ನು ಗಟ್ಟಿ ನೆಲೆಯಲ್ಲಿ ಪ್ರತಿನಿಧಿಸುತ್ತದೆ.  

ಕೆಲ ವರ್ಷಗಳಿಂದ ತುಳು ಸಿನಿಮಾ ರಂಗ ಮತ್ತೆ ಸಕ್ರಿಯವಾಗಿದೆ. ಆದರೆ ಹಾಸ್ಯಕ್ಕೆ ಹೆಚ್ಚಿನ ಒತ್ತುನೀಡಿ ಜಾಳುಜಾಳಾದ ಕಥಾ ಹಂದರವುಳ್ಳ ತುಳು ಸಿನಿಮಾಗಳೇ ಹೆಚ್ಚಾಗಿ ಸೆಟ್ಟೇರುತ್ತಿದೆ. ಈ ದೃಷ್ಟಿಯಿಂದ ಕೊರಮ್ಮ ಸದಭಿರುಚಿಯ ಸಾಲಿಗೆ ಸೇರಿದ ಸಿನಿಮಾವಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಅಭಿನಯಿಸಿರುವ ಎಲ್ಲರ ಪಾತ್ರವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸಂಭಾಷಣೆ, ವಸ್ತ್ರವಿನ್ಯಾಸ, ಕಲಾ ನಿರ್ದೇಶನದ ದೃಷ್ಟಿಯಲ್ಲಿ ಪರಿಪಕ್ವ ಎನ್ನಬಹುದು. ಹೆಚ್ಚು ಹಿನ್ನಲೆ ಸಂಗೀತ ಬಳಸದೆ ಅಲ್ಲಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹಿನ್ನಲೆ ಸಂಗಿತ ಬಳಸಿರುವುದು ಪ್ರಯೋಗಾತ್ಮಕತೆ ಎನಿಸಿತು. ಸಿನಿಮಾದ ಕಥೆ ಹಳೆಯ ತಲೆಮಾರಿನ ಎಲ್ಲಾ ಗುತ್ತು - ಒಕ್ಕಲು ಮನೆಯ ಸಾಮಾನ್ಯ ಕಥೆಯಂತಿದೆ. ಸಿನಿಮಾದಲ್ಲಿ ಸೀಮಂತ ಹಾಗೂ ಸಾವಿನ ಸನ್ನಿವೇಶ ಕೊಂಚ ದಾಖಲೀಕರಣದ ಜಾಡು ಹಿಡಿದಂತಿದೆ. ಆದರೂ ಕಲಾತ್ಮಕ ಸಿನಿಮಾದ ದೃಷ್ಟಿಯಿಂದ ತುಳು ಸಿನಿಮಾರಂಗದಲ್ಲಿ ಒಂದು ಮೈಲುಗಲ್ಲಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

Ads on article

Advertise in articles 1

advertising articles 2

Advertise under the article