ಬೆಳ್ತಂಗಡಿ: ಕೇವಲ ರೋಪ್ ಬಳಸಿ ಗಡಾಯಿಕಲ್ಲು ಏರಿ ಕೋತಿರಾಜು ಸಾಧನೆ
Sunday, February 12, 2023
ಬೆಳ್ತಂಗಡಿ: ದೇಶದಲ್ಲಿ 'ಮಂಕಿಮ್ಯಾನ್', ಕೋತಿರಾಜು ಎಂದೇ ಪ್ರಖ್ಯಾತರಾಗಿರುವ ಚಿತ್ರದುರ್ಗದ ಜ್ಯೋತಿರಾಜ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗಡಾಯಿಕಲ್ಲನ್ನು ಕೇವಲ ರೋಪ್ ಸಹಾಯದಿಂದಲೇ ಏರಿ ಸಾಧನೆ ಮೆರೆದಿದ್ದಾರೆ.
ಗಡಾಯಿಕಲ್ಲು ಸಮುದ್ರಮಟ್ಟದಿಂದ ಸುಮಾರು 1700 ಅಡಿ ಎತ್ತರದಲ್ಲಿದೆ. ಈ ಗಡಾಯಿಕಲ್ಲನ್ನು ಕೇವಲ ಎರಡು ಗಂಟೆಯಲ್ಲಿ ರೋಪ್ ಸಹಾಯದಿಂದ ಏರಿ ಕೋತಿರಾಜು ಸಾಧನೆ ಮಾಡಿದ್ದಾರೆ. ಈ ಮೂಲಕ ಬರೀ ರೋಪ್ ಮೂಲಕ ಗಡಾಯಿಕಲ್ಲನ್ನು ಏರಿದ ಮೊದಲ ವ್ಯಕ್ತಿ ಎಂಬ ಸಾಧನೆಗೆ ಅವರು ಪಾತ್ರರಾಗಿದ್ದಾರೆ. ಈ ಗಡಾಯಿಕಲ್ಲು ಏರುವ ಮೊದಲು ಅವರು, ಕೆಳಗಿರುವ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಳದ ಅರ್ಚಕರು ತೆಂಗಿನಕಾಯಿ ಒಡೆದು ಗಡಾಯಿಕಲ್ಲು ಏರಿ ಸಾಹಸ ಮೆರೆಯಲು ದೇವರ ಅಪ್ಪಣೆ ಪಡೆದಿದ್ದಾರೆ.
ಮೆಟಲ್ ರೋಪ್ ಬಳಸಿ ಗಡಾಯಿಕಲ್ಲು ಏರಲು ಆರಂಭಿಸಿದ ಕೋತಿರಾಜು ಸತತ ಎರಡು2ಗಂಟೆಗಳ ಕಾಲ ಗುಡ್ಡ ಹತ್ತಿ ಗಡಾಯಿಕಲ್ಲು ತುದಿಯನ್ನು ತಲುಪಿದ್ದಾರೆ. ಈ ಸಂತಸಕ್ಕೆ ಗುಡ್ಡದ ತುದಿಯಲ್ಲಿ ಕನ್ನಡ ಬಾವುಟ ಹಾರಿಸಿದ್ದಾರೆ. ಕಳೆದರೆಡು ದಿನಗಳಿಂದ ಗಡಾಯಿಕಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದ ಕೋತಿರಾಜು ಹಾಗೂ ತಂಡ ಗಡಾಯಿಕಲ್ಲು ಏರುವ ಸವಾಲುಗಳ ಬಗ್ಗೆ ಸಮಾಲೋಚನೆ ಮಾಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ಗಡಾಯಿಕಲ್ಲು ಏರಲು ಕೋತಿರಾಜುಗೆ ಎಂಟು ಮಂದಿ ಶಿಷ್ಯ ವರ್ಗ ಸಹಾಯ ಮಾಡಿದೆ.
ಕಳೆದ ಎರಡು ವರ್ಷಗಳ ಹಿಂದೆ ಜೋಗದಲ್ಲಿ ಬಿದ್ದು ಬೆನ್ನುಮೂಳೆಗೆ ಏಟುಮಾಡಿಕೊಂಡಿದ್ದ ಕೋತಿರಾಜು ಒಂದೂವರೆ ವರ್ಷ ವಿಶ್ರಾಂತಿಯಲ್ಲಿದ್ದರು. ಈ ವೇಳೆ ಸುಮಾರು 130 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ಅವರು ಇದೀಗ ಮತ್ತೆ ವ್ಯಾಯಾಮ ಮಾಡಿ ದೇಹದ ತೂಕ ತಗ್ಗಿಸಿ ಕೋತಿ ರಾಜು ಸಾಹಸ ಮುಂದುವರಿಸಿದ್ದಾರೆ. ಮುಂದಿನ ವಾರ ಮಂಗಳೂರಿನ ಅತೀ ಎತ್ತರದ ಕಟ್ಟಡ ಏರಲು ಪ್ಲಾನ್ ರೂಪಿಸಿರುವ ಕೋತಿ ರಾಜು, ಇದಕ್ಕಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ರವರ ಸಹಕಾರ ಕೋರಿದ್ದಾರೆ.