ಪೊಲೀಸ್ ಕೈಗೆ ಸಿಗದೆ ಎಸ್ಕೇಪ್ ಆದ ನಟಿ ಅಭಿನಯಾ ಅರೆಸ್ಟ್ ಗೆ ಲುಕ್ ಔಟ್ ನೋಟಿಸ್ ಜಾರಿ
Friday, February 10, 2023
ಬೆಂಗಳೂರು: ಪಾಲಕರೊಂದಿಗೆ ಸೇರಿ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ 'ಅನುಭವ' ಸಿನಿಮಾ ಖ್ಯಾತಿಯ ಹಿರಿಯ ನಟಿ ಅಭಿನಯಾ ಅವರಿಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಟಿ ಅಭಿನಯಾ ಅವರ ತಾಯಿ ಸರೋಜಮ್ಮ ಹಾಗೂ ಸಹೋದರ ಚೆಲುವರಾಜು ತಲೆಮರೆಸಿಕೊಂಡಿದ್ದಾರೆ. ಆದ್ದರಿಂದ ಈ ಮೂವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸರು ಲುಕ್ ಔಟ್ ನೋಡೀಸನ್ನು ಜಾರಿ ಮಾಡಿದ್ದಾರೆ.
2002ರಲ್ಲಿ ಅಭಿನಯಾ ಅತ್ತಿಗೆ ಲಕ್ಷ್ಮೀದೇವಿ ಎಂಬವರು ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ಮದುವೆಯಾಗಿದ್ದರು. ವಿವಾಹದ ಸಂದರ್ಭ ವರಕ್ಷಿಣೆ ಪಡೆದಿದ್ದಲ್ಲದೆ, ಮದುವೆಯ ಬಳಿಕ ಪದೇಪದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಹಣ ಕೊಟ್ಟರೂ ತನ್ನನ್ನು ಪಾಲಕರ ಮನೆಯಲ್ಲಿ ಬಿಟ್ಟಿದ್ದರು ಎಂದು ದೂರಿನಲ್ಲಿ ಲಕ್ಷ್ಮೀದೇವಿ ಆರೋಪಗಳ ಸುರಿಮಳೆಗೈದಿದ್ದರು.
ಶ್ರೀನಿವಾಸ್ ಮತ್ತವರ ಕುಟುಂಬ ಸದಸ್ಯರನ್ನು ದೋಷಿಗಳೆಂದು ತೀರ್ಮಾನಿಸಿ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಗಳೆಲ್ಲರಿಗೂ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿತ್ತು. ಜತೆಗೆ, ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಜಯಮ್ಮ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ಮತ್ತು ಸೆಕ್ಷನ್ 4ರ ಅಡಿಯಲ್ಲಿ 6 ತಿಂಗಳು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 2010ರ ಜ.5ರಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಆರೋಪಿಗಳೆಲ್ಲರೂ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3ರಡಿ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಸರ್ಕಾರವೂ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಆರೋಪಿಗಳ ಮೇಲ್ಮನವಿಯನ್ನು ಮಾನ್ಯ ಮಾಡಿ, ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣ ಹೆಚ್ಚಳಕ್ಕೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ, 2012ರ ಮಾ.9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹಾಗೂ ದೂರುದಾರೆ ಲಕ್ಷ್ಮೀದೇವಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಆದ್ದರಿಂದ ಆರೋಪಿಗಳನ್ನು ದೋಷಿ ಎಂದು ನಿರ್ಧರಿಸಿರುವ ನ್ಯಾಯಾಲಯ, ಶಿಕ್ಷೆ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯಿಂದ ಪಾರಾಗಲು ನಟಿ ಅಭಿನಯಾ ಹಾಗೂ ಆಕೆಯ ಕುಟುಂಬಿಕರು ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡಿರುವ ನಟಿ ಅಭಿನಯಾ ಹಾಗೂ ಆಕೆಯ ಕುಟುಂಬಸ್ಥರ ಪತ್ತೆಗೆ ಚಂದ್ರಾ ಲೇಔಟ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕರಿಗೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.