Mangaluru: ಕುಲದೀಪ್ ಕುಮಾರ್ ಆರ್. ಜೈನ್ ಮಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕಾರ
Friday, February 24, 2023
ಮಂಗಳೂರು: ನೂತನ ಪೊಲೀಸ್ ಕಮಿಷನರ್ ಆಗಿ ಇಂದು ಕುಲದೀಪ್ ಕುಮಾರ್ ಆರ್. ಜೈನ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್., ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕುಲದೀಪ್ ಕುಮಾರ್ ಆರ್. ಜೈನ್ ಅವರು ರಾಜಸ್ತಾನದಲ್ಲಿ ಹುಟ್ಟಿದ್ದು. ಆದರೆ ಬೆಳೆದಿದ್ದು, ಶಿಕ್ಷಣ ಪೂರೈಸಿದ್ದು ಚೆನ್ನೈನಲ್ಲಿ. 2011 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಅವರು ಮಂಗಳೂರಿನಲ್ಲಿ ಪ್ರೊಬೆಷನರಿ ಅವಧಿಯನ್ನು ಪೂರೈಸಿದ್ದರು. ಆ ಬಳಿಕ ಚೆನ್ನಪಟ್ಟಣ ಎಎಸ್ಪಿ, ಚಾಮರಾಜನಗರ, ಬಿಜಾಪುರದಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿ, ಬಳಿಕ ಬೆಂಗಳೂರು ಸಿಟಿಯಲ್ಲಿ ಡಿಸಿಪಿ ಕ್ರೈಂ ಹಾಗೂ ಡಿಸಿಪಿ ಟ್ರಾಫಿಕ್ ಆಗಿದ್ದರು. ಅಲ್ಲದೆ ಕೆಎಸ್ಆರ್ ಪಿ ಹಾಗೂ ಎಸಿಬಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಪ್ರೊಬೆಷನರಿ ಅವಧಿಯಲ್ಲಿ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ್ದೆ. ಇದೀಗ ಮಂಗಳೂರು ಬಹಳಷ್ಟು ಬದಲಾವಣೆ ಆಗಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಇದ್ದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುತ್ತಾದೆ. ಯಾರು ಅದಕ್ಕೆ ಹೊಣೆಗಾರರು ಇರುತ್ತಾರೋ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಂಗಳೂರು ಸೂಕ್ಷ್ಮ ಪ್ರದೇಶವಾಗಿದ್ದರೆ, ನಾನೂ ಅಷ್ಟೇ ಸೂಕ್ಷ್ಮವಾಗಿ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತೇನೆ. ಹಾಗೆಯೇ ಯಾವ ರೀತಿಯಲ್ಲಿ ಕ್ರಮಗಳು ಆಗಬೇಕೋ ಅದು ಆಗುತ್ತದೆ ಎಂದು ಹೇಳಿದರು.
ನನ್ನ ಅವಧಿಯಲ್ಲಿ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನೂ ಕೇಳಿಕೊಳ್ಳುತ್ತಿದ್ದೇನೆ. ಜನಸಾಮಾನ್ಯರಿಗೆ ಎಷ್ಟು ಅನುಕೂಲ ಕೆಲಸಗಳು ಆಗುತ್ತದೆಯೋ ಅಷ್ಟು ಮಾಡಬೇಕು. ಈ ಬಗ್ಗೆ ಅಧಿಕಾರಿ, ಸಿಬ್ಬಂದಿಯ ಕಾರ್ಯಚಟುವಟಿಕೆಗಳನ್ನು ನಾನೇ ವೀಕ್ಷಿಸುತ್ತೇನೆ. ಟ್ರಾಫಿಕ್ ರೂಲ್ ಬ್ರೇಕ್ ಮಾಡುತ್ತಿರುವವರ ಮೇಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.