ಭಿಕ್ಷುಕನ ವೇಷದಲ್ಲಿ ಪತ್ನಿಯನ್ನೇ ಇರಿದು ಹತ್ಯೆಗೈಯಲು ಯತ್ನಿಸಿದ ಪ್ರೊಫೆಸರ್: ಶೀಲ ಶಂಕಿಸಿ ಮರ್ಡರ್ ಪ್ಲ್ಯಾನ್ ಮಾಡಿದ ಅಸಾಮಿಯೀಗ ಪೊಲೀಸ್ ಅತಿಥಿ
Monday, February 20, 2023
ಚೆನ್ನೈ: ಪತ್ನಿಯ ಶೀಲ ಶಂಕಿಸಿದ 58 ವರ್ಷದ ಕಾಲೇಜು ಪ್ರೊಫೆಸರ್ ಓರ್ವ ಆಕೆಯನ್ನು ಭಿಕ್ಷುಕನ ವೇಷದಲ್ಲಿ ಬಂದು ಸಾರ್ವಜನಿಕವಾಗಿ ಕೊಲೆಗೆ ಯತ್ನಿಸಿದ್ದ ಘಟನೆ ಚೆನ್ನೈನಲ್ಲಿನಡೆದಿದೆ. ಇದೀಗ ಪ್ರೊಫೆಸರ್ ಪೊಲೀಸ್ ಅತಿಥಿಯಾಗಿದ್ದಾನೆ.
ನಂದನಂ ಕಲಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ ಕುಮಾರಸ್ವಾಮಿ ಕೃತ್ಯ ಎಸಗಿ ಪೊಲೀಸ್ ಅತಿಥಿಯಾಗಿರುವ ಅಸಾಮಿ. ಈತ ಗುರುವಾರ ಸಂಜೆ ಎಗೋರ್ಆಂಗ್ಲೋ-ಇಂಡಿಯನ್ ಕ್ವಾರ್ಟರ್ಸ್ ರಸ್ತೆಯಲ್ಲಿ ಬಸ್‌ನಿಂದ ಇಳಿಯುತ್ತಿದ್ದಂತೆ ಪತ್ನಿ ಜಯವಾಣಿ (38)ಯನ್ನು ಬ್ಲೇಡ್‌ನಿಂದ ಕೊಯ್ದು ಕೊಲೆಗೈಯ್ಯಲು ಯತ್ನಿಸಿದ್ದಾನೆ. ಜಯವಾಣಿಯ ಮುಖವನ್ನು ಗುರಿಯಾಗಿಸಿಕೊಂಡು ಇರಿಯಲು ಯತ್ನಿಸಿದ ವೇಳೆ ಆಕೆ ತನ್ನ ಕೈಗಳಿಂದ ಕುತ್ತಿಗೆ ಮತ್ತು ಮುಖವನ್ನು ಮುಚ್ಚಿಕೊಂಡಿದ್ದಾರೆ.
ಈ ವೇಳೆ ಅವರ ಕೈಗಳಿಗೆ ಗಾಯವಾಗಿದೆ. ಆದರೂ ಜಯವಾಣಿ ಸ್ಥಳದಿಂದ ಓಡಲಾರಂಭಿಸಿದ್ದಾರೆ. ಆದರೆ ಭಿಕ್ಷುಕನ ವೇಷದಲ್ಲಿದ್ದ ಪತಿ ಕುಮಾತಸ್ವಾಮಿ ಆಕೆಯನ್ನು ಬೆನ್ನಟ್ಟಿದ್ದಾನೆ. ಅಲ್ಲದೆ ಆತ ಹಲವಾರು ಬಾರಿ ಬ್ಲೇಡ್ ನಿಂದ ಇರಿದಿರುವ ಪರಿಣಾಮ ಆಕೆಯ ದೇಹದಲ್ಲಿ ಅನೇಕ ಗಾಯಗಳಾಗಿವೆ.
ಈ ಘಟನೆಯಿಂದ ಆಘಾತಕ್ಕೊಳಗಾದ ಸಾರ್ವಜನಿಕರು ತಕ್ಷಣ ಜಾಗೃತರಾಗಿದ್ದಾರೆ. ಈ ವೇಳೆ ದಾಳಿಕೋರ ಪ್ರೊಫೆಸರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರಲ್ಲಿ ಭಿಕ್ಷುಕನ ವೇಷದಲ್ಲಿ ಬಂದು ತನ್ನ ಪತಿಯೇ ಈ ದಾಳಿ ಎಸಗಿರುವುದಾಗಿ ಜಯವಾಣಿ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಪತಿ ಕುಮಾರಸ್ವಾಮಿಯನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಪತ್ನಿಯ ಶೀಲದ ಬಗ್ಗೆ ಶಂಕೆಯಿದ್ದರಿಂದ ಆಕೆಯನ್ನು ಕೊಲೆ ಮಾಡಲು ಯತ್ನಿಸಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ತನ್ನ ಪತ್ನಿಗೆ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ವ್ಯಕ್ತಿ ಅನುಮಾನಿಸಿದ್ದ. ದಂಪತಿಯ ವಯಸ್ಸಿನ ನಡುವೆ 20 ವರ್ಷಗಳ ಅಂತರವಿತ್ತು. ಇದೇ ಪತಿಯಲ್ಲಿ ಅನುಮಾನ ಮೂಡಲು ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಯವಾಣಿಯವರು ಕುಮಾರಸ್ವಾಮಿಯನ್ನು ವಿವಾಹವಾಗುವ ವೇಳೆಗೆ ಆಕೆ ಇನ್ನೂ ವಿದ್ಯಾರ್ಥಿನಿಯಾಗಿದ್ದರು. ಕುಮಾರಸ್ವಾಮಿ ಆಕೆಯ ತಂದೆಯ ಕುಟುಂಬ ಸ್ನೇಹಿತನಾಗಿದ್ದರಿಂದ ಜಯವಾಣಿ ಶಿಕ್ಷಣದ ವೆಚ್ಚವನ್ನು ನೋಡಿಕೊಳ್ಳುತ್ತಿದ್ದನು. ಬಳಿಕ ಆಕೆಯನ್ನೇ ವಿವಾಹವಾಗಿದ್ದನು. ಇತ್ತೀಚೆಗೆ ಇತ್ತೀಚೆಗೆ ವಯಸ್ಸಿನ ಅಂತರದ ಪರಿಣಾಮ ಕುಮಾರಸ್ವಾಮಿ ಆಕೆಯ ನಿಷ್ಠೆಯನ್ನು ಅನುಮಾನಿಸಲು ಪ್ರಾರಂಭಿಸಿದ್ದಾನೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.