ಆಸ್ತಿ ಆಸೆಗೆ ನಡೆಯಿತು ಒಂದೇ ಕುಟುಂಬದ ನಾಲ್ವರ ಹತ್ಯೆ: ಆಟ-ನಿದ್ದೆ ಮಕ್ಕಳಿಬ್ಬರ ಪ್ರಾಣ ಉಳಿಸಿತು...!
Saturday, February 25, 2023
ಉತ್ತರಕನ್ನಡ: ಇಲ್ಲಿನ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ನಡೆದ ತಂದೆ-ತಾಯಿ ಹಾಗೂ ಮಗ-ಸೊಸೆ ಸೇರಿದಂತೆ ನಾಲ್ವರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿ ಹೊರಬಿದ್ದಿದೆ. ಈ ಕೊಲೆಯ ಹಿಂದೆ ಆಸ್ತಿಯ ವ್ಯಾಜ್ಯ ಕಾರಣ ಎನ್ನಲಾಗಿದೆ. ಆದರೆ ಈ ಕೊಲೆ ನಡೆದ ವೇಳೆ ನಾಲ್ಕು ವರ್ಷದ ಮಗು ಮಲಗಿದ್ದರಿಂದ ಹಾಗೂ 10ವರ್ಷದ ಮತ್ತೊಂದು ಮಗು ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ನಿವಾಸಿ ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ಮನೆಯ ಹೊರಗಡೆ ನಾಲ್ವರ ಮೃತದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ನಾಲ್ವರನ್ನು ಅಟ್ಟಾಡಿಸಿ ಕತ್ತಿಯಿಂದ ಕಡಿದು ಹಾಕಿರುವಂಥ ಸನ್ನಿವೇಶ ಕಂಡುಬಂದಿದೆ.
ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಕುಟುಂಬಸ್ಥರಿಂದ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈಕೆಯ ಪತಿ ಶ್ರೀಧರ್ ಭಟ್ ಕೆಲ ತಿಂಗಳ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಆ ಬಳಿಕ ಶಂಭು ಭಟ್ ಬಳಿ ವಿದ್ಯಾ ಭಟ್ ಜೀವನಾಂಶಕ್ಕೆ ಆಸ್ತಿಯಲ್ಲಿ ಪಾಲು ಕೊಡುವಂತೆ ಆಕೆಯ ಕುಟುಂಬಸ್ಥರು ಕೇಳಿದ್ದರು. ಇದೇ ವಿಚಾರವಾಗಿ ಹಲವು ಬಾರಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಆ ಬಳಿಕ ವಿದ್ಯಾ ಭಟ್‌ಗೆ ಶಂಭು ಭಟ್ ಅವರು ಆಸ್ತಿಯಲ್ಲಿ ಪಾಲು ನೀಡಿದ್ದರು.
ಆ ಆಸ್ತಿಯನ್ನು ವಿನಯ್ ಭಟ್ ಎಂಬಾತ ನೋಡಿಕೊಳ್ಳುತ್ತಿದ್ದನು. ಆತನೇ ಈ ಪಾತಕಿ ಕೃತ್ಯವನ್ನು ಎಸಗಿದ್ದಾನೆ ಎಂದು ಹೇಳಲಾಗಿದೆ. ಸದ್ಯಕ್ಕೆ ವಿನಯ್ ಭಟ್ ಪರಾರಿಯಾಗಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹತ್ಯೆ ನಡೆದ ವೇಳೆ 10 ವರ್ಷದ ಒಂದು ಮಗು ಪಕ್ಕದ ಮನೆಯಲ್ಲಿ ಆಟವಾಡುತಿತ್ತು. ನಾಲ್ಕು ವರ್ಷದ ಮತ್ತೊಂದು ಮಗು ಮಲಗಿತ್ತು. ಪ್ರಾಣಾಪಾಯದಿಂದ ಪಾರಾಗಿರುವ ಮಕ್ಕಳಿಬ್ಬರೂ ಇದೀಗ ಇಡೀ ಕುಟುಂಬವನ್ನೇ ಕಳೆದುಕೊಂಡು ಅನಾಥರಾದಂತಾಗಿದೆ. ವಿದ್ಯಾ ಭಟ್ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾ ಕುಟುಂಬಸ್ಥರನ್ನು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಮುಖ್ಯ ಆರೋಪಿಗಾಗಿ ಪತ್ತೆ ಕಾರ್ಯಾಚರಣೆಯೂ ಮುಂದುವರಿದಿದೆ.