ಮಂಗಳೂರು: ಸಚಿವ ಸುನಿಲ್ ಕುಮಾರ್ ವಿರುದ್ಧ ಚುನಾವಣೆ ಎದುರಿಸಲು ಬಿಜೆಪಿ ನಾಯಕರಿಂದಲೇ ಹಣದ ಸಹಕಾರ - ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Monday, February 13, 2023
ಮಂಗಳೂರು: ಮುಂದಿನ ಸಿಎಂ ಎಂದು ಸಚಿವ ಸುನಿಲ್ ಕುಮಾರ್ ಬಿಂಬಿತವಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಪಟ್ಟಕ್ಕೆ ಸೂಟು ಬೂಟು ಹೊಲಿಸಿಕೊಂಡು ಸರಣಿಯಲ್ಲಿ ನಿಂತಿರುವ ಬಿಜೆಪಿಯ ಕೆಲ ನಾಯಕರುಗಳೇ ತಾನು ಕಾರ್ಕಳದಲ್ಲಿ ಚುನಾವಣೆ ಎದುರಿಸಲು ಹಣದ ಸಹಕಾರ ನೀಡುವುದಾಗಿ ಪರೋಕ್ಷವಾಗಿ ಹೇಳಿದ್ದಾರೆಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ಆರ್ಯ ಸಮಾಜದ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಬಾಡಿಗೆ ಮನೆಯಲ್ಲಿರುವ ತನ್ನಲ್ಲಿ ದುಡ್ಡಿಲ್ಲ, ಬ್ಯಾಂಕ್ ಖಾತೆಯಿಲ್ಲ. ಆದ್ದರಿಂದ ಜನರಲ್ಲಿ ಮತದೊಂದಿಗೆ ನೂರರ ನೋಟು ಕೇಳುತ್ತಿದ್ದೇನೆ. ತನಗೆ ಸಹಕರ ಸಿಗುತ್ತಲೂ ಇದೆ. ಆದ್ದರಿಂದ ತನಗೆ ದುಡ್ಡಿನ ಕೊರತೆಯಾಗೋಲ್ಲ. ಈ ಮೂಲಕ ಹಿಂದುತ್ವದ ವಿಜಯ ಕಾರ್ಕಳದಿಂದ ಹೊಸ ಇತಿಹಾಸ ಬರೆಯಲಿದೆ ಎಂದರು.
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ತಾನು ಚುನಾವಣಾ ಕಣಕ್ಕಿಳಿಯಬಾರದೆಂದು ಆರ್ ಎಸ್ ಎಸ್, ಬಿಜೆಪಿಯಿಂದ ಯಾವ ಕರೆಯೂ ಬಂದಿಲ್ಲ. 2014ರಿಂದಲೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನಗೆ ರಾಜಕೀಯದ ಅರಿವಿರದ ಕಾರಣ ನಾನು ವಿಫಲನಾಗಿದ್ದೇನೆ. ಪ್ರಾಮಾಣಿಕತೆ, ನೇರಮಾತು ನನ್ನ ರಾಜಕೀಯದ ಮುಂದುವರಿಕೆಗೆ ಮುಳ್ಳಾಗಿದೆ. ಬಿಜೆಪಿಗೆ ಬಕೆಟ್ ಹಿಡಿದಿದ್ದಲ್ಲಿ, ಅವರ ಭ್ರಷ್ಟಾಚಾರ, ಢೋಂಗಿ ಹಿಂದುತ್ವಕ್ಕೆ ಸಹಕರಿಸಿದ್ದಲ್ಲಿ ನಾನಿಂದು ಎಲ್ಲೋ ಹೋಗ್ತಿದ್ದೆ. ಆದ್ದರಿಂದ ಈ ಬಾರಿ ನಾನು ಪಕ್ಷೇತರ ಅಭ್ಯರ್ಥಿಯೆಂದು ಘೋಷಿಸಿ ನೇರವಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದರು.
ಅಸಲಿ ಹಿಂದುತ್ವ ಹಾಗೂ ನಕಲಿ ಹಿಂದುತ್ವ, ಭ್ರಷ್ಟಾಚಾರ - ಪ್ರಾಮಾಣಿಕತೆ ಇವರೆಡು ವಿಚಾರವನ್ನು ಮುಂದಿಟ್ಟು ನಾನು ಕಾರ್ಕಳದಲ್ಲಿ ಚುನಾವಣಾ ಕಣಕ್ಕಿಳಿದಿದ್ದೇನೆ. ಶಾಸಕ ಸುನಿಲ್ ಕುಮಾರ್ 2004ರಲ್ಲಿ ಚುನಾವಣೆ ಎದುರಿಸಿದಾಗ ಘೋಸಿರುವ ಆಸ್ತಿ ಎಷ್ಟಿತ್ತು ಹಾಗೂ ಮೂರು ಬಾರಿ ಗೆದ್ದ ಬಳಿಕ ಇಂದಿನ ಆಸ್ತಿಯ ಮೌಲ್ಯ ಎಷ್ಟು ಹೆಚ್ಚಾಗಿದೆ ನೋಡಿದಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತಿಳಿಯಲು ಸಾಧ್ಯ. ನನ್ನ ಮೇಲೆ ಹಾಕಿರುವ 109ಪ್ರಕರಣಗಳಲ್ಲಿ ಅಧಿಕ ಕೇಸ್ ದಾಖಲಿಸಿದ್ದೇ ಬಿಜೆಪಿ. ಇನ್ನು ಗಡಿಪಾರು, ನಿರ್ಬಂಧನೆ ಅಧಿಕವಾಗಿ ವಿಧಿಸಿದ್ದು ಕೂಡಾ ಬಿಜೆಪಿ. ಆದ್ದರಿಂದ ಚುನಾವಣೆ ವೇಳೆ ನಿರ್ಬಂಧನೆ ಎಂಬುವುದು ಮಾಡಲಿಕ್ಕಿಲ್ಲ. ಮಾಡಿದ್ದಲ್ಲಿ ಉಲ್ಟಾ ಹೊಡೆಯುತ್ತದೆ. ಪ್ರವೇಶ ನಿರ್ಬಂಧ ಮಾಡಿದ್ದಲ್ಲಿ ಕೋರ್ಟ್ ಗೆ ಹೋಗದೆ ನಾನು ಹೊರಗಡೆ ಇದ್ದುಕೊಂಡೇ ಗೆದ್ದು ತೋರಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.