ನಳಿನ್ ಆಪ್ತನಿಂದ ಮಾಜಿ ಯೋಧನಿಗೆ ವಂಚನೆ: ನಕಲಿ ಆದೇಶ ನೀಡಿ 70 ಲಕ್ಷ ವಂಚಿಸಿದ ಅಬ್ದುಲ್ ರಜಾಕ್!
ನಳಿನ್ ಆಪ್ತನಿಂದ ಮಾಜಿ ಯೋಧನಿಗೆ ವಂಚನೆ: ನಕಲಿ ಆದೇಶ ನೀಡಿ 70 ಲಕ್ಷ ವಂಚಿಸಿದ ಅಬ್ದುಲ್ ರಜಾಕ್!
ಕಡಿಮೆ ಕ್ರಯದಲ್ಲಿ ಸರ್ಕಾರಿ ಜಾಗ ದೊರಕಿಸಿಕೊಡುತ್ತೇನೆ ಎಂದು ಹೇಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪರಮಾಪ್ತನೊಬ್ಬ ಮಾಜಿ ಯೋಧನಿಗೆ ಪಂಗನಾಮ ಹಾಕಿದ್ದಾನೆ.
ಮಂಗಳೂರು ಮೂಲಕ ಬಿಜೆಪಿ ನಾಯಕ ಹಾಗೂ ನಳಿನ್ ಆಪ್ತ ಅಬ್ದುಲ್ ರಜಾಕ್ ಈ ಕೃತ್ಯ ಎಸಗಿದ ಆರೋಪಿ. ಈತ ವಿಕ್ರಂ ದತ್ತ ಎಂಬವರಿಗೆ ವಂಚನೆ ಮಾಡಿದ್ದು, ಈ ವಿಷಯವನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಯು.ಟಿ. ಖಾದರ್ ಸದನದಲ್ಲಿ ಪ್ರಸ್ತಾಪ ಮಾಡಿದ್ಧಾರೆ.
ಅಬ್ದುಲ್ ರಜಾಕ್ ಬಿಜೆಪಿ ನಾಯಕರ ದಲ್ಲಾಳಿಯಾಗಿ ಹಲವಾರು ಅಪಕೃತ್ಯಗಳನ್ನು ಎಸಗಿದ್ದು, ಈತ ಹಲವಾರು ಪ್ರಕರಣಗಳಲ್ಲಿ ವಂಚನೆ ಎಸಗಿದ ಮಾಹಿತಿ ಇದೆ ಎಂದು ಖಾದರ್ ಹೇಳಿದ್ದಾರೆ.
ಸರ್ಕಾರದ ಜಂಟಿ ಕಾರ್ಯದರ್ಶಿ ರವೀಂದ್ರನಾಥ್ ನಾಯ್ಕ ಅವರ ಸಹಿ ಮತ್ತು ಸೀಲ್ ಇರುವ ಸರ್ಕಾರಿ ಆದೇಶವನ್ನು ವಿಕ್ರಂ ದತ್ತ ಅವರಿಗೆ ನೀಡಿರುವ ಅಬ್ದುಲ್ ರಜಾಕ್ ಮಾಜಿ ಯೋಧರಿಗೆ ಸರ್ಕಾರದ ಮಾನದಂಡದಲ್ಲಿ ಕಡಿಮೆ ಬೆಲೆಗೆ ಜಾಗ ನೀಡುವ ಆಮಿಷವೊಡ್ಡಿ 70 ಲಕ್ಷ ರೂಪಾಯಿ ಗುಳುಂ ಮಾಡಿದ್ದ.
ಈ ಆದೇಶದ ಪ್ರಕಾರ ಸದ್ರಿ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದಾಗ ಅಂತಹ ಜಾಗವೇ ಇರಲಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಹೇಗೆ ನಡೆಯುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಅಬ್ದುಲ್ ರಜಾಕ್ ಎಂಬ ಈ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳೂರು ವಿಮಾನ ನಿಲ್ದಾಣದ ಒಳಗಡೆ ಖಾಸಗಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಖಾದರ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವ ಮಾಧುಸ್ವಾಮಿ ಮತ್ತು ಕಂದಾಯ ಸಚಿವ ಅಶೋಕ್ ಭರವಸೆ ನೀಡಿದ್ದಾರೆ.
ಚೆಕ್ ಅಮಾನ್ಯ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅಬ್ದುಲ್ ರಜಾಕ್ ಆರೋಪಿಯಾಗಿದ್ದಾರೆ ಎನ್ನಲಾಗಿದೆ.