![ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಅಪರಾಧಿ ಯುವಕನಿಗೆ ಜೀವಾವಧಿ ಶಿಕ್ಷೆ ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಅಪರಾಧಿ ಯುವಕನಿಗೆ ಜೀವಾವಧಿ ಶಿಕ್ಷೆ](https://blogger.googleusercontent.com/img/b/R29vZ2xl/AVvXsEiOP7l3iBZTJhRtDrB4y9zgcYgUZqklxzk4Hcr6ooDtAZnuOKdinP91Z15f9AO4F1OHM57BwiSt5GIJ7Hmm5oSLV5t-GXSQW6qt8O0oNJhQyLIwRecFzAguGvAF1b1ff0esMVOq0tc14igt/s1600/1677223302143166-0.png)
ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಅಪರಾಧಿ ಯುವಕನಿಗೆ ಜೀವಾವಧಿ ಶಿಕ್ಷೆ
Friday, February 24, 2023
ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ)ದ ನ್ಯಾಯಾಧೀಶರು ಯುವಕನೋರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಪುಲ್ಲೇರಿ ಮನೆಯ ಸತೀಶ್ ಪೂಜಾರಿ (35) ಶಿಕ್ಷೆಗೊಳಗಾಗದ ಅಪರಾಧಿ.
2019ರ ಫೆ.11ರ ಮಧ್ಯಾಹ್ನ 1 ಗಂಟೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಸತೀಶ ಪೂಜಾರಿ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ 2019ರ ಮಾರ್ಚ್ 22ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್ ಆರೋಪಿ ಸತೀಶನನ್ನು ಬಂಧಿಸಿದ್ದರು. ತನಿಖೆ ನಡೆಸಿದ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಉಪವಿಭಾಗಧಿಕಾರಿ ಕಚೇರಿಯ ಹೆಚ್‌ಸಿ ಸೀತರಾಮ ಹಾಗೂ ಪಿಸಿ ಸಫೀನಾ ತನಿಖೆಗೆ ಸಹಕರಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ) ಆರೋಪಿಗೆ 10 ವರ್ಷ ಜೈಲುವಾಸ, 10 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಹನಾ ದೇವಿ ವಾದಿಸಿದ್ದರು.