ದೇಶದ ಮೊದಲ ತೃತೀಯ ಲಿಂಗಿಯಿಂದ ಗರ್ಭಧಾರಣೆ: ಫೋಟೋ ವೈರಲ್
Thursday, February 2, 2023
ಕೊಚ್ಚಿ: ವೈದ್ಯಲೋಕವು ಸದಾ ಸದಾ ಒಂದಿಲ್ಲೊಂದು ಕ್ರಾಂತಿ ಹಾಗೂ ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇದೀಗ ವೈದ್ಯಲೋಕದಲ್ಲಿ ಮತ್ತೊಂದು ಮಹತ್ತರ ಬೆಳವಣಿಗೆಯೊಂದು ನಡೆದಿದೆ. ಹೌದು... ದೇಶದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಗರ್ಭಧರಿಸಿದ್ದಾರೆ.
ಜಹಾದ್ ಫಾಜಿಲ್ ಹಾಗೂ ಜಿಯಾ ಪೊವೆಲ್ ಇಬ್ಬರೂ ಕೇರಳದ ತೃತೀಯಲಿಂಗಿ ದಂಪತಿ. ಹುಟ್ಟಿನಲ್ಲಿ ಹೆಣ್ಣಾಗಿದ್ದರೂ ಆ ಬಳಿಕ ಗಂಡಾಗಿ ಬದಲಾದ ಜಹಾದ್ ಫಾಜಿಲ್ ಇದೀಗ 8 ತಿಂಗಳ ಗರ್ಭ ಧರಿಸಿದ್ದಾರೆ. ಈ ಬಗ್ಗೆ ಜಿಯಾ ಪೊವೆಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು 'ತಾಯಿಯಾಗುವ ನನ್ನ ಕನಸಿನಂತೆ, ತಂದೆಯಾಗುವ ಅವನ ಹಂಬಲದಂತೆ, ನಮ್ಮ ಸ್ವಂತದ ಆಸೆಯೂ ಈಡೇರಲಿದೆ ಎಂದು ಬರೆದುಕೊಂಡಿದ್ದಾರೆ.
'ಹುಟ್ಟಿನಿಂದಾಗಲೀ, ದೇಹದಿಂದಾಗಲೀ ನಾನು ಹೆಣ್ಣಾಗಲಿಲ್ಲ. ಆದರೆ ನನ್ನೊಳಗಿನ ನನ್ನ ಹೆಣ್ತನವನ್ನು ಅರಿತಿದ್ದೆ. ಆದರೆ, ನನ್ನೊಳಗೆ ಸದಾ ಇದ್ದ ಕನಸೆಂದರೆ ಅದು “ಅಮ್ಮ”...?. ಕಾಲ ನನ್ನ ಆಸೆಗಳನ್ನು ತಿಳಿದಿತ್ತು. ಹೊಟ್ಟೆಯಲ್ಲಿರುವುದು ಯಾರೆಂದು ತಿಳಿಯದಿದ್ದರೂ ಒಂಬತ್ತು ತಿಂಗಳು ಕಾಯುವುದು ತಾಯಿಯ ಪ್ರಕ್ರಿಯೆಯಲ್ಲವೇ? ಎಂದು ಜಿಯಾ ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ್ದಾರೆ.
ಜಹಾದ್ ಫಾಝಿಲ್, ನನ್ನ ಕನಸಿನಲ್ಲಿ ನನ್ನೊಂದಿಗೆ ಸೇರಿಕೊಂಡನು. ಬಹಳಷ್ಟು ಮಾನಸಿಕ ಹಿಂಸೆಗಳನ್ನು ಅನುಭವಿಸಿದನು. ಆ ಬಳಿಕ ತನ್ನ ಇಚ್ಛೆಗೆ ಅನುಸಾರವಾಗಿ ತನ್ನ ದೇಹವನ್ನು ಬದಲಾಯಿಸಲು ಪ್ರಾರಂಭಿಸಿದನು. ಹಾರ್ಮೋನ್ ಚಿಕಿತ್ಸೆ ಹಾಗೂ ಸ್ತನ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾದನು. ಕಾಲ ಇಂದು ನಮ್ಮನ್ನು ಜೊತೆ ಮಾಡಿಸಿದೆ. ಇಂದು ಫಾಝಿಲ್ 8 ತಿಂಗಳ ಗರ್ಭಧಾರಿಯಾಗಿದ್ದಾನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಜಿಯಾ ಬರೆದುಕೊಂಡಿದ್ದಾರೆ.