ಪ್ರಚೋದನಕಾರಿ ಭಾಷಣ ಮಾಡಿದ್ದ ಶರಣ್ ಪಂಪ್ ವೆಲ್ ವಿರುದ್ಧ ಎಫ್ಐಆರ್ ದಾಖಲು
Wednesday, February 1, 2023
ತುಮಕೂರು: 'ಸುರತ್ಕಲ್ ಫಾಝಿಲ್ ಹತ್ಯೆ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ' ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲು ಮಾಡಲಾಗಿದೆ.
ನಗರದ ಬಾರ್‌ಲೈನ್ ನಿವಾಸಿಯಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಮಕೂರಿನಲ್ಲಿ ಇತ್ತೀಚೆಗೆ ನಡೆದಿರುವ ಶೌರ್ಯಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಶರಣ್ ಪಂಪ್ ವೆಲ್, "ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಯಾರು ಮುಸಲ್ಮಾನ ಜಿಹಾದಿಗಳಿದ್ದಾರೆ, ಅವರಿಗೆ ಉತ್ತರ ನೀಡಬೇಕೆನ್ನುವ ಕಾರಣಕ್ಕೆ ಸುರತ್ಕಲ್ ನಲ್ಲಿ ಇದ್ದಂತಹ ಬಿಸಿ ನೆತ್ತರಿನ ಯುವಕರು, ಯಾರು ಇಲ್ಲದ ಸಂದರ್ಭದಲ್ಲಲ್ಲ, ಇಡೀ ಮಾರ್ಕೆಟ್ ನಲ್ಲಿ ಜನರಿದ್ದ ವೇಳೆಯೇ ನುಗ್ಗಿ ನುಗ್ಗಿ ಹೊಡೆದು ಪ್ರತಿಕಾರ ನೀಡ್ತಾರಲ್ವ ಅದು ಹಿಂದೂ ಯುವಕರ ತಾಕತ್ತು" ಎಂದು ಫಾಝಿಲ್ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು. ಈ ಕುರಿತ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.