ಪತಿ ಹೃದಯಾಘಾತಕ್ಕೆ ಬಲಿ: ಪುತ್ರನೊಂದಿಗೆ ಒಂದೇ ಉರುಳಿಗೆ ಕೊರಳೊಡ್ಡಿ ಪತ್ನಿ ಆತ್ಮಹತ್ಯೆ
Saturday, February 25, 2023
ತುಮಕೂರು: ಪತಿ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಮನನೊಂದ ಪತ್ನಿ ತನ್ನ ಪುತ್ರನೊಂದಿಗೆ ಒಂದೇ ಉರುಳಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತಿಪಟೂರು ನಗರದ ಶಾರದಾ ನಗರದ ನಿವಾಸಿ ಸೌರಭಾ (33) ಹಾಗೂ ಅವರ ಪುತ್ರ ಆರ್ಯ(7) ಆತ್ಮಹತ್ಯೆಗೆ ಶರಣಾದವರು. ಸೌರಭಾ ಅವರ ಪತಿ ಎರಡು ತಿಂಗಳ ಹಿಂದೆ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಪತಿಯ ಸಾವಿನಿಂದ ಮನನೊಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎರಡು ದಿನಗಳ ಹಿಂದೆ ನೇಣಿಗೆ ಶರಣಾಗಿರುವ ಶಂಕೆ ಮೂಡಿದೆ. ಸ್ಥಳಕ್ಕೆ ತಿಪಟೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ನಡೆಯುತ್ತಿದೆ.