ವಿವಾಹದ ದಿನ ವರ ಸ್ವಿಚ್ ಆಫ್ ಮಾಡಿ ನಾಪತ್ತೆ: ಮುಂದಾಗಿದ್ದು ಘೋರ ದುರಂತ
Sunday, February 26, 2023
ತಿರುವನಂತಪುರ: ವಿವಾಹದ ದಿನವೇ ವರನೊಬ್ಬ ಫೋನ್ ಸ್ವಿಚ್ ಮಾಡಿ ನಾಪತಗತೆಯಾಗಿದ್ದರಿಂದ ಮನನೊಂದು 23 ವರ್ಷದ ಯುವತಿ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.
ಕೊಲ್ಲಂನ ವಟ್ಟಪಾಡ್‌ನಲ್ಲಿರುವ ಮಧು ಭವನ್ ನಿವಾಸಿ. ಧನ್ಯಾ ಮೃತ ಯುವತಿ. ಈಕೆಯ ಮೃತದೇಹ ಶನಿವಾರ ಬೆಳಗ್ಗೆ ತನ್ನ ಬೆಡ್‌ರೂಮ್‌ನ ಬಾತ್‌ರೂಮ್‌ನಲ್ಲಿ ನೇಣು ಬಿಗಿದು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತಪಟ್ಟ ಧನ್ಯಾ ಹಾಗೂ ಕೊಲ್ಲಂನ ಅಂಚಲದ ಅತಿಶಯಮಂಗಲಂ ನಿವಾಸಿ ಅಖಿಲ್ ಕಳೆದು ಒಂದು ವರ್ಷದಿಂದ ಪ್ರೀತಿಯ ಬಲೆಗೆ ಬಿದ್ದಿದ್ದರು. ಫೆ.15ರಂದು ಮನೆಯಿಂದ ಧನ್ಯಾ ನಾಪತ್ತೆಯಾಗಿದ್ದಳು. ಆದ್ದರಿಂದ ಆಕೆಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಧನ್ಯಾ, ಅಖಿಲ್ ನೊಂದಿಗೆ ಇರುವುದು ತಿಳಿದು ಬಂದಿದೆ. ಬಳಿಕ ಧನ್ಯಾ ಕುಟುಂಬಸ್ಥರ ಮುಂದೆ ಆಕೆಯನ್ನು ರಿಜಿಸ್ಟರ್ ಮದುವೆ ಆಗುವುದಾಗಿ ಅಖಿಲ್ ಆಣೆ ಮಾಡಿದ್ದ. ಮದುವೆಯ ದಿನಾಂಕವು ನಿಗದಿಯಾಯಿತು. ಅದರಂತೆ ಮದುವೆಯ ದಿನ ಧನ್ಯಾ ಹಾಗೂ ಆಕೆಯ ಕುಟುಂಬ ಇಟ್ಟಿವಾ ಗ್ರಾಮ ಪಂಚಾಯಿತ್ ಗೆ ತೆರಳಿದರು. ರಿಜಿಸ್ಟರ್ ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅಖಿಲ್ ನಾಪತ್ತೆಯಾಗಿದ್ದ
ಧನ್ಯಾ ಹಾಗೂ ಆಕೆಯ ಕುಟುಂಬ ಅಖಿಲ್ ಫೋನ್‌ಗೆ ಎಷ್ಟೇ ಪ್ರಯತ್ನಿಸಿದರೂ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಸಾಕಷ್ಟು ಸಮಯದವರೆಗೂ ಕಾದು, ಅಖಿಲ್ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಧನ್ಯಾ ಮತ್ತು ಆಕೆಯ ಕುಟುಂಬ ಬಹಳ ಬೇಸರದಿಂದ ಮನೆಗೆ ವಾಪಸ್ ಆಗಿತ್ತು.
ಅಖಿಲ್ ಮಾಡಿರುವ ವಂಚನೆಯಿಂದ ಮನನೊಂದು ಅದರಿಂದ ಹೊರಬರಲಾಗದ ಧನ್ಯಾ ಸಾವಿನ ಹಾದಿ ಹಿಡಿದಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ಸಂಬಂಧ ಕಡಕ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅಖಿಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.