![ಮಂಗಳೂರು: ಅಂಗವೈಕಲ್ಯಕ್ಕೆ ಸಡ್ಡು ಹೊಡೆದ ಯುವಕ - ಭಿಕ್ಷಾಟನೆ ತೊರೆದು ಸ್ವಿಗ್ಗಿ ಡೆಲಿವರಿ ಬಾಯ್ ಆದ ಮಂಗಳೂರು: ಅಂಗವೈಕಲ್ಯಕ್ಕೆ ಸಡ್ಡು ಹೊಡೆದ ಯುವಕ - ಭಿಕ್ಷಾಟನೆ ತೊರೆದು ಸ್ವಿಗ್ಗಿ ಡೆಲಿವರಿ ಬಾಯ್ ಆದ](https://blogger.googleusercontent.com/img/b/R29vZ2xl/AVvXsEhcWJNsPnjrZ6OFl2rSCfS-yULX66A5Z_AQfJQ3N68DOLK20pedrfwgTyFFAKI2pyuSMnHNiAYBZ_GSj6l_8vIPWoK_9Ec8HXLgatexJF4ZLxG0su344OV5JzxLHJ1GcKWoOip0WLChHcMR/s1600/1676213873249838-0.png)
ಮಂಗಳೂರು: ಅಂಗವೈಕಲ್ಯಕ್ಕೆ ಸಡ್ಡು ಹೊಡೆದ ಯುವಕ - ಭಿಕ್ಷಾಟನೆ ತೊರೆದು ಸ್ವಿಗ್ಗಿ ಡೆಲಿವರಿ ಬಾಯ್ ಆದ
Sunday, February 12, 2023
ಮಂಗಳೂರು: ಎಲ್ಲಾ ಅಂಗಾಂಗಗಳು ಸರಿಯಾಗಿದ್ದರೂ ಕೆಲವರು ಯಾವುದೇ ಕೆಲಸ ಮಾಡದೆ ಉಂಡಾಡಿಗಳಂತೆ ಸುತ್ತಾಡುತ್ತಿರುತ್ತಾರೆ. ಹಲವರು ದುಡಿಯಲು ರಟ್ಟೆಯಲ್ಲಿ ಬಲವಿದ್ದರೂ ಭಿಕ್ಷೆ ಬೇಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಾಲಿನಲ್ಲಿ ಬಲವಿಲ್ಲದಿದ್ದರೂ ಕೈಯನ್ನೇ ಆಧಾರವಾಗಿಟ್ಟುಕೊಂಡು ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಸ್ವಿಗ್ಗಿ ಬಾಯ್ ಆಗಿ ದುಡಿಯುತ್ತಿದ್ದಾನೆ.
ಹೌದು... ಇವನ ಹೆಸರು ಪರಶುರಾಮ. ಮೂಲತಃ ಬಿಜಾಪುರ ಮೂಲದ ಈತನ ಹೆತ್ತವರು ಕಳೆದ 30ವರ್ಷಗಳಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಆದ್ದರಿಂದ ಈತ ತಾನು ಮಂಗಳೂರಿಗನೆಂದೇ ಹೇಳುತ್ತಾನೆ.
ಇವನು ಕೈಯ ಆಧಾರವಿಲ್ಲದೆ ಒಂದಡಿ ಹೆಜ್ಜೆ ಇಡಲೂ ಸಾಧ್ಯವಿಲ್ಲ. ಆದರೆ ದೈಹಿಕ ನ್ಯೂನತೆಗೆ ಸಡ್ಡು ಹೊಡೆದು ಭಿಕ್ಷಾಟನೆ ಬಿಟ್ಟು ಫುಡ್ ಡೆಲಿವರಿ ಬಾಯ್ ಆಗಿ ಜೀವನವನ್ನೇ ಗೆದ್ದಿದ್ದಾರೆ.
ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಪರಶುರಾಮ ಒಮ್ಮೆ ಜ್ವರಕ್ಕೆ ತುತ್ತಾಗಿದ್ದ. ಆಗ ವೈದರೊಬ್ಬರು ನೀಡಿರುವ ಇಂಜೆಕ್ಷನ್ ನಿಂದ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲಿನಲ್ಲಿ ಕೊಂಚ ಬಲವಿದ್ದರೂ, ಜೀವನಪರ್ಯಂತದ ಅಂಗವೈಕಲ್ಯ ತಗುಲಿತು. 9ನೇ ತರಗತಿಯವರೆಗೆ ಶಿಕ್ಷಣ ಪಡೆದ ಪರಶುರಾಮ ಆ ಬಳಿಕ ಮನೆಯಲ್ಲಿ ಬಡತನವಿದ್ದರಿಂದ ಭಿಕ್ಷಾಟನೆಗಿಳಿದ. ಆದರೆ ಸ್ವಲ್ಪ ಕಾಲ ಭಿಕ್ಷೆ ಬೇಡಿದ ಆತ ತಾನು ದುಡಿದು ಜೀವಿಸಬೇಕೆಂದು ಒಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯಲಾರಂಭಿಸಿದ.
ಸರಕಾರದ ಸ್ಕೀಮ್ ಒಂದರಲ್ಲಿ ದ್ವಿಚಕ್ರ ವಾಹನ ದೊರೆಯಿತು. ಆ ಬಳಿಕದಿಂದ ಸಂಜೆಯಿಂದ ರಾತ್ರಿಯವರೆಗೆ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಈಗ ಅಂಗಾಂಗ ಸರಿ ಇದ್ದವರನ್ನೂ ಮೀರಿಸುವಂತೆ ದುಡಿದು ಸಾಧನೆ ಮಾಡುತ್ತಿದ್ದಾರೆ. ಇಂತಹ ಪರಶುರಾಮ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಇವರಿಗೆ ನೆರವಾಗಲಿಚ್ಚಿಸುವವರು ಈ ಮೊಬೈಲ್ ಸಂಖ್ಯೆಯನ್ನು +91 94831 95832 ಸಂಪರ್ಕಿಸಬಹುದು.