ಪ್ರಖ್ಯಾತ ಗಾಯಕಿ ವಾಣಿ ಜಯರಾಂ ಸಾವಿನ ಸುತ್ತ ಅನುಮಾನದ ಹುತ್ತ: ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಚೆನ್ನೈ ಪೊಲೀಸರು
Sunday, February 5, 2023
ಚೆನ್ನೈ: ಪ್ರಖ್ಯಾತ ಗಾಯಕಿ ವಾಣಿ ಜಯರಾಂ ಚೆನ್ನೈನ ನುಂಗಂಬಾಕಮ್‌ನಲ್ಲಿನ ಹದೌಸ್ ರಸ್ತೆಯಲ್ಲಿರುವ ತಮ ನಿವಾಸದಲ್ಲಿ ಫೆ.4ರಂದು ಮೃತಪಟ್ಟಿದ್ದಾರೆ. ಇದೀಗ ಅವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
2018ರಲ್ಲಿ ವಾಣಿ ಜಯರಾಂ ಅವರ ಪತಿ ಜಯರಾಂ ಅವರು ಮೃತಪಟ್ಟಿದ್ದರು. ಬಳಿಕ ಅವರು ಒಬ್ಬರೇ ವಾಸಿಸುತ್ತಿದ್ದರು. ಅವರ ಮನೆಗೆಲಸದಾಕೆ ಮಲಾರ್‌ಕೋಡಿ ಎಂಬವರು ಎಂದಿನಂತೆ ನಿನ್ನೆ ಬೆಳಗ್ಗೆ 11 ಗಂಟೆಗೆ ಮನೆಗೆ ಬಂದಾಗ ಮನೆ ಲಾಕ್ ಆಗಿತ್ತು. ಎಷ್ಟು ಬಾರಿ ಬೆಲ್ ಒತ್ತಿದರೈ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಆಕೆ ತಕ್ಷಣ ವಾಣಿ ಜಯರಾಂ ಅವರ ಸಹೋದರಿ ಉಮಾ ಅವರಿಗೆ ಮಾಹಿತಿ ನೀಡಿದ್ದಾರೆ.
ಇದಾದ ಬಳಿಕ ಉಮಾ ಮತ್ತು ಮಲಾರ್‌ಕೋಡಿ ಇಬ್ಬರೂ ನಕಲಿ ಕೀ ಬಳಸಿ ಮನೆ ಪ್ರವೇಶಿಸಿದ್ದಾರೆ. ಈ ವೇಳೆ ವಾಣಿ ಜಯರಾಂ ಅವರು ಬೆಡ್‌ರೂಮ್‌ನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಅವರ ಹಣೆಯಲ್ಲಿ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈ ಕಿಲ್ಪಕ್ ಆಸ್ಪತ್ರೆಗೆ ರವಾನಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಪೊಲೀಸರ ವಿಧಿವಿಜ್ಞಾನ ತಂಡ ವಾಣಿ ಜಯರಾಂ ಅವರ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದೆ. ಟ್ರಿಪ್ಲಿಕೇನ್‌ನ್ ಡಿಸಿಪಿ ಶೇಖರ್ ದೇಶಮುಖ್ ಮಾತನಾಡಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಹೆಚ್ಚಿನ ವಿವರಗಳನ್ನು ತಿಳಿಯಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು.