ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ
Thursday, February 23, 2023
ಮಂಗಳೂರು: ಭಾರತ ಮೂಲದ ವಿವೇಕ್ ರಾಮಸ್ವಾಮಿ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ವಿಚಾರ ಅಮೆರಿಕಾದಲ್ಲಿನ ಭಾರತೀಯರಿಗೆ ರೋಮಾಂಚನ ಉಂಟುಮಾಡಿದೆ.
ಈಗಾಗಲೇ ಡೊನಾಲ್ಡ್ ಟ್ರಂಪ್ ಹಾಗೂ ನಿಕ್ಕಿ ಹ್ಯಾಲೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಿನ ಅಧ್ಯಕ್ಷ ಜೋ ಬೈಡೆನ್ ಮತ್ತು ಡೆಮೊಕ್ರೆಟಿಕ್ ಪಕ್ಷದ ಸದಸ್ಯರು 2021ರ ಜನವರಿ 6ರಲ್ಲಿ ಅಮೆರಿಕಾದ ಪಾರ್ಲಿಮೆಂಟ್ ಮೇಲೆ ನಡೆದ ಆಕ್ರಮಣದ ಪ್ರಮುಖ ಆರೋಪಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಗಾದರೂ ಮಾಡಿ ಸ್ಪರ್ಧೆ ಮಾಡದಂತೆ ಅನರ್ಹಗೊಳಿಸಬೇಕೆಂದು ಸತತ ಪ್ರಯತ್ನ ಮಾಡುತ್ತಿದ್ದಾರೆ.
ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಅನರ್ಹಗೊಂಡಲ್ಲಿ ರಿಪಬ್ಲಿಕ್ ಪಾರ್ಟಿಯಲ್ಲಿ ನಡೆಯುವ ಇಂಟರ್ನಲ್ ಪ್ರೈಮರಿ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿ ಅವರಿಗೆ ಗೆಲ್ಲುವ ಅವಕಾಶ ಬಹಳ ಹೆಚ್ಚು ಇರುತ್ತದೆ. ಇನ್ನೊಂದೆಡೆ ಡೆಮಾಕ್ರೆಟಿಕ್ ಪಾರ್ಟಿಯ ಅಭ್ಯರ್ಥಿಯಾಗಿ ಈಗಾಗಲೇ 80 ವರ್ಷ ದಾಟಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್ ಮತ್ತೆ ಸ್ಪರ್ಧಿಸುವ ನಿರೀಕ್ಷೆ ಇದೆ.
37 ವರ್ಷದ ತರುಣ ವಿವೇಕ್ ರಾಮಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುವ ಹೇಳಿಕೆ ನೀಡುವ ಮೂಲಕ ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಇವರ ತಂದೆ- ತಾಯಿ ರಾಮಸ್ವಾಮಿ ಮತ್ತು ಗೀತಾ ಕೇರಳದಿಂದ ಕೆಲವು ದಶಕಗಳ ಹಿಂದೆಯೇ ಅಮೆರಿಕದ ಓಹೈವೋ ರಾಜ್ಯಕ್ಕೆ ವಲಸೆ ಬಂದಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಅತ್ಯಂತ ಪ್ರತಿಭಾವಂತರಾದ ವಿವೇಕ್ ರಾಮಸ್ವಾಮಿ ಪ್ರತಿಷ್ಠಿತ ಹಾರ್ವರ್ಡ್ ಮತ್ತು ಯೇಲ್ ಯುನಿವರ್ಸಿಟಿಗಳಿಂದ ಡಿಗ್ರಿ ಪಡೆದಿದ್ದಾರೆ. ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಯಶಸ್ವಿ ಉದ್ಯಮಿಯಾಗಿ ವಿವೇಕ್ ಅವರು ಬಹುದೊಡ್ಡ ಪ್ರಶಂಸೆ ಗಳಿಸಿದ್ದಾರೆ. ಇವರು ಫಾರ್ಮಸಿಟಿಕಲ್ ಕಂಪನಿ ರೊಯ್ಲೆಂಟ್ ಸೈನ್ಸಸ್ (Roivant Sciences) ಮೆಡಿಕೇರ್ ನೇವಿಗೇಷನ್ ಕಂಪನಿ ಚಾಪ್ಟರ್ ಮೆಡಿಕೇರ್ ಮತ್ತು ಸಾಫ್ಟ್‌ವೇರ್ ಹಾಗೂ ನೆಟ್‌ವರ್ಕ್ ಕಂಪನಿ ಕ್ಯಾಂಪಸ್ ವೆಂಚರ್ ನೆಟ್‌ವರ್ಕ್ ಸ್ಥಾಪಿಸಿದ್ದಾರೆ. ಇವರ ಬಗ್ಗೆ ಪ್ರತಿಷ್ಠಿತ ಫೋರ್ಬ್ ಮ್ಯಾಗಜಿನ್ ಲೇಖನ ಪ್ರಕಟಿಸಿತ್ತು. ವಿವೇಕ್ ಅವರ ಪತ್ನಿ ಹೆಸರು ಅಪೂರ್ವ ತಿವಾರಿ ಮತ್ತು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.