ಈ ಬಾರಿ ಕಾಂಗ್ರೆಸ್ ಗೆ 115ಕ್ಕೂ ಹೆಚ್ಚು ಸ್ಥಾನ, ಬಿಜೆಪಿಗೆ 68; ಎಬಿಪಿ ಸಿ ವೋಟರ್ ಸಮೀಕ್ಷೆ
Wednesday, March 29, 2023
ಎಬಿಪಿ ಸಿ ವೋಟರ್ ಸಮೀಕ್ಷೆ ಪ್ರಕಟಿಸಿದ್ದು,ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ತಿಳಿಸಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಎಬಿಪಿ ಸಿ ವೋಟರ್ ಸಮೀಕ್ಷೆ ಬುಧವಾರ ಮುನ್ಸೂಚನೆ ನೀಡಿದೆ. ಆಡಳಿತಾರೂಢ ಬಿಜೆಪಿ 68 ಸ್ಥಾನಗಳನ್ನಷ್ಟೇ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದ್ದು, ಜೆಡಿಎಸ್ 23 ಸ್ಥಾನಗಳನ್ನು ಪಡೆಯಬಹುದು ಎಂದು ತಿಳಿಸಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಕಟವಾದ ಬೆನ್ನಲ್ಲೇ ಸಮೀಕ್ಷಾ ವರದಿ ಪ್ರಕಟವಾಗಿದೆ. ಕಾಂಗ್ರೆಸ್ 115 ರಿಂದ 127 ಸ್ಥಾನ, ಬಿಜೆಪಿ 68ರಿಂದ 80 ಸ್ಥಾನಗಳು ಮತ್ತು ಜೆಡಿಎಸ್‌ಗೆ 23ರಿಂದ 35 ಸ್ಥಾನಗಳು ದೊರೆಯಬಹುದು ಎಂದು ಸಮೀಕ್ಷಾ ವರದಿ ತಿಳಿಸಿದೆ. ಪಕ್ಷೇತರರು 0-2 ಸ್ಥಾನ ಪಡೆಯಬಹುದು ಎಂದು ತಿಳಿಸಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ 19 – 23 ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಬಿಜೆಪಿ 8 – 12 ಸ್ಥಾನ ಪಡೆಯಲಿದೆ. ಜೆಡಿಎಸ್ ಹಾಗೂ ಪಕ್ಷೇತರರು ತಲಾ 1 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಯು ತಿಳಿಸಿದೆ.
ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಶೇ 43 ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ಆದರೆ, ಕಾಂಗ್ರೆಸ್ 25-29 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಲಾಗಿದೆ, ಆದರೆ ಬಿಜೆಪಿ 21-25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಕರಾವಳಿಯಲ್ಲಿ ಬಿಜೆಪಿ – ಕಾಂಗ್ರೆಸ್ ಪ್ರಬಲ ಪೈಪೋಟಿ ಇರಲಿದೆ. ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಶೇ 46 ಮತಗಳನ್ನು ಗಳಿಸುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ ಶೇ 41 ಮತದಾರರ ಬೆಂಬಲವನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಜೆಡಿಎಸ್ ಒಟ್ಟು ಮತಗಳ ಶೇ 6ಕ್ಕಿಂತ ಹೆಚ್ಚು ಪಡೆಯುವ ಸಾಧ್ಯತೆಯು ಕಡಿಮೆ. ಇದು ಚುನಾವಣೆ ದೃಷ್ಟಿಯಿಂದ ಕರ್ನಾಟಕದ ಅತ್ಯಂತ ಚಿಕ್ಕ ಪ್ರದೇಶವಾಗಿದ್ದು, ಕೇವಲ 21 ಸ್ಥಾನಗಳನ್ನು ಹೊಂದಿದೆ ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿಯ ಪಕ್ಷದ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಶೇ 38ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಶೇ 41 ಮತಗಳನ್ನು ಗಳಿಸುವ ಸಾಧ್ಯತೆಯಿದೆ. ಸೀಟುಗಳ ಪ್ರಕಾರ, 35 ಸ್ಥಾನಗಳ ಪ್ರದೇಶದಲ್ಲಿ bjp 12-16 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕಾಂಗ್ರೆಸ್ 18-22 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಭಾಗದಲ್ಲಿ ಜೆಡಿಎಸ್‌ಗೆ 2ಕ್ಕಿಂತ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಸಮೀಕ್ಷಾ ವರದಿ ಹೇಳಿದೆ.
ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿ ಸಮೀಕ್ಷೇ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದವರ ಪೈಕಿ ಸಿದ್ದರಾಮಯ್ಯ ಪರ ಒಲವು ವ್ಯಕ್ತವಾಗಿದೆ. ಅವರು ಅಗ್ರಸ್ಥಾನದಲ್ಲಿದ್ದು, ಅವರ ಪರವಾಗಿ ಶೇ 39.1ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಪರ ಶೇ 31.1ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದರೆ, ಹೆಚ್ ಡಿ ಕುಮಾರಸ್ವಾಮಿ ಪರ ಶೇ 21.4 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಪರ ಕೇವಲ ಶೇ 3.2ರಷ್ಟು ಮಂದಿ ಮಾತ್ರ ಒಲವು ವ್ಯಕ್ತಪಡಿಸಿದ್ದಾರೆ.