
ಪ್ರೇಯಸಿ ಇನ್ ಸ್ಟಾಗ್ರಾಂನಲ್ಲಿ ಮತ್ತೊಬ್ಬ ಯುವಕನೊಂದಿಗೆ ಚ್ಯಾಟ್ ಮಾಡಿದ್ದಾಳೆಂದು ಆಕೆಯನ್ನು ಹತ್ಯೆಗೈದ 17ವರ್ಷದ ಬಾಲಕ
Saturday, March 11, 2023
ಗೊಡ್ಡಾ: ತನ್ನ ಪ್ರೇಯಸಿ ಬೇರೆ ಹುಡುಗನೊಂದಿಗೆ ಇನ್ ಸ್ಟಾಗ್ರಾಮ್‌ನಲ್ಲಿ ಚ್ಯಾಟ್ ಮಾಡುತ್ತಿದ್ದಾಳೆಂದು 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಕಬ್ಬಿಣದ ಸರಳಿನಲ್ಲಿ ಆಕೆಯ ತಲೆಗೆ ಹೊಡೆದು ಹತ್ಯೆಗೈದಿರುವ ಭಯಾನಕ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಳಿ ದಿನದಿಂದ ಬಾಲಕಿ ನಾಪತ್ತೆಯಾಗಿದ್ದಳು. ಆದರೆ ಬಾಲಕಿಯ ಮೃತದೇಹ ಗುರುವಾರ ಝಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಬಯಲೊಂದರಲ್ಲಿ ಶವವಾಗಿ ಪತ್ತೆಯಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಗೊಡ್ಡಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಾಥು ಸಿಂಗ್ ಮೀನಾ, ಊರ್ಜಾನಗರದ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಹಾಗೂ ಮೃತಪಟ್ಟ ಬಾಲಕಿ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಆದರೆ ಬಾಲಕಿಯು ಮತ್ತೊಬ್ಬ ಬಾಲಕನೊಂದಿಗೆ ಇನ್ ಸ್ಟಾಗ್ರಾಮ್‌ನಲ್ಲಿ ಮಾತುಕತೆ ನಡೆಸುತ್ತಿದ್ದಾಳೆ ಎಂಬ ಸಂಗತಿ ಬಾಲಕನಿಗೆ ತಿಳಿಯಿತು. ಇದರಿಂದ ಕ್ರೋಧಗೊಂಡ ಬಾಲಕ ಬುಧವಾರ ಸಂಜೆ ತನ್ನ ಗೆಳತಿಯ ಮನೆಗೆ ಹೋಗಿದ್ದಾನೆ. ಈ ವೇಳೆ ಹೋಳಿ ಹಬ್ಬ ಆಚರಿಸಲು ತೆರಳುತ್ತಿದ್ದ ಬಾಲಕಿಯನ್ನು ಮಾರ್ಗಮಧ್ಯದಲ್ಲಿ ತಡೆದು, ಆಕೆಯ ತಲೆಗೆ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಬಾಲಕ ತನ್ನ ತಪ್ರೊಪ್ಪಿಕೊಂಡಿದ್ದಾನೆ. ಬಾಲಕಿಯ ಮೃತದೇಹ ದೊರೆತ ಸ್ಥಳದಿಂದ ಕೆಲ ಮೀಟರ್‌ಗಳ ದೂರದಲ್ಲಿ ಅಪರಾಧಕ್ಕೆ ಬಳಸಲಾದ ಕಬ್ಬಿಣದ ಸರಳು ಹಾಗೂ ಬಾಲಕಿಯ ಮೊಬೈಲ್ ಫೋನ್ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಲು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಶಿವ್ ಶಂಕರ್ ತಿವಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನನ್ನು ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದುಪೊಲೀಸರು ಹೇಳಿದ್ದಾರೆ.