ಬಾಲಕಿಯನ್ನು ಅಪಹರಿಸಿ ವಿವಾಹವಾದವನಿಗೆ 20 ವರ್ಷ, ಸಹಕರಿಸಿದ ಗಳೆಯನಿಗೆ 3ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
Friday, March 10, 2023
ಬೆಂಗಳೂರು: ಪ್ರವಾಸಕ್ಕೆ ಹೋಗಿದ್ದ ಸಂದರ್ಭ ಪರಿಚಿತಳಾದ ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ನಂಬಿಸಿ ಆಕೆಯನ್ನು ಅಪಹರಣ ಮಾಡಿ ವಿವಾಹವಗಿ ಲೈಂಗಿಕ ಸಂಪರ್ಕ ಬೆಳೆಸಿದ ಟೆಂಪೋ ಟ್ರಾವೆಲರ್ ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್‌ಟಿಎಸ್‌ಸಿ 3ನೇ ಕೋರ್ಟ್ ತೀರ್ಪು ನೀಡಿದೆ.
ಆಂಧ್ರಪ್ರದೇಶ ಮೂಲದ ಮಂಜುನಾಥ ರೆಡ್ಡಿ ಶಿಕ್ಷೆಗೊಳಗಾದ ಅಪರಾಧಿ. ಬಾಲಕಿಯ ಅಪಹರಣಕ್ಕೆ ಸಹಕರಿಸಿರುವ ಅಪರಾಧದ ಮೇಲೆ ಪರಪ್ಪನ ಅಗ್ರಹಾರದ ಶರತ್ ಎಂಬಾತನಿಗೆ 3 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ
2017ರಲ್ಲಿ ಅಪರಾಧಿಯ ಟೆಂಪೋ ಟ್ರಾವೆಲ್‌ನಲ್ಲಿ ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಸಂತ್ರಸ್ತೆಯನ್ನು ಟೆಂಪೊ ಟ್ರ್ಯಾವೆಲರ್ ಡ್ರೈವರ್ ಮಂಜುನಾಥ್ ಪರಿಚಯ ಮಾಡಿಕೊಂಡಿದ್ದ. ಆ ಬಳಿಕ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಮಾತನಾಡಲು ಆರಂಭಿಸಿದ್ದ. ಬಳಿಕ ಆಕೆಯ ಕಾಲೇಜು ಬಳಿಗೆ ಹೋಗಿ ಭೇಟಿ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದ. ಬಳಿಕ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಇಲ್ಲವಾದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದ.
ಕೊನೆಗೆ ವಿಧಿ ಇಲ್ಲದೆ ಬಾಲಕಿ ಆತನನ್ನು ಮದುವೆಯಾಗಲು ಒಪ್ಪಿದ್ದಾಳೆ. ಅದರಂತೆ 2017ರ ನ.8ರ ರಾತ್ರಿ ಅಪರಾಧಿ ಶರತ್ ಕಾರಿನಲ್ಲಿ ಬಾಲಕಿ ಮನೆಗೆ ಹೋಗಿ ಮಂಜುನಾಥ್ ರೆಡ್ಡಿ ಬಾಲಕಿಯನ್ನು ಅಪಹರಿಸಿದ್ದಾನೆ. ಅಲ್ಲಿಂದ ಆಕೆಯನ್ನು ಕರೆದುಕೊಂಡು ಹೋಗಿ ಶಿವಮೊಗ್ಗ ಜಿಲ್ಲೆಯ ತುರುವೆಕೆರೆ ತಾಲೂಕಿನ ಕಡೆಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಆ ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈ ಬಗ್ಗೆ ಬಾಲಕಿ ತಾಯಿ ನೀಡಿದ ದೂರಿನನ್ವಯ ಪರಪ್ಪನ ಅಗ್ರಹಾರ ಪೊಲೀಸರು ಪೊಕ್ಸೊ ಮತ್ತು ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಇಬ್ಬರನ್ನೂ ಬಂಧಿಸಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ, ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯವಾದಿ ಇಸ್ರತ್ ಜಹಾನ್ ಅರ, ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.