ವಿವಾಹವಾಗಿ 22 ವರ್ಷಗಳಾದರೂ ಪತ್ನಿ ಮನೆಗೆ ಹೋಳಿ ಹಬ್ಬಕ್ಕೆ ಹೋಗಿಲ್ಲ: 10 ದಿನಗಳ ರಜೆ ಬೇಕೆಂದು ಎಸ್ಪಿಗೆ ಪತ್ರ ಬರೆದ ಇನ್ ಸ್ಪೆಕ್ಟರ್
Monday, March 6, 2023
ಉತ್ತರ ಪ್ರದೇಶ: ವಿವಾಹವಾಗಿ 22 ವರ್ಷಗಳಾದರೂ ಒಂದು ಬಾರಿಯೂ ಪತ್ನಿಯ ತವರು ಮನೆಯಲ್ಲಿ ನಡೆಯುವ ಸಂಭ್ರಮದ ಹೋಳಿ ಹಬ್ಬಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಬಾರಿ ತಾನೂ ಆಕೆಯ ತವರು ಮನೆಗೆ ಹೋಗಬೇಕೆಂದು ಪತ್ನಿ ಬಯಸಿದ್ದಾಳೆ. ಆದ್ದರಿಂದ ತನಗೆ 10 ದಿನಗಳ ರಜೆ ನೀಡಬೇಕೆಂದು ಇನ್ ಸ್ಪೆಕ್ಟರ್ ಒಬ್ಬರು ಎಸ್‌ಪಿಗೆ ಪತ್ರ ಬರೆದಿರುವ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿರುವ ಫತೇಘರ್ ಎಂಬಲ್ಲಿ ನಡೆದಿದೆ. ಇನ್ಸ್ ಪೆಕ್ಟರ್ ಮನವಿಗೆ ಸ್ಪಂದಿಸಿರುವ ಎಸ್‌ಪಿ 10 ದಿನಗಳ ರಜೆ ಸಾಧ್ಯವಿಲ್ಲವೆಂದು ಹೇಳಿ 5 ದಿನ ರಜೆ ನೀಡಿದ್ದಾರೆ.
ಇದೀಗ ಇನ್ ಸ್ಪೆಕ್ಟರ್ ರಜೆ ಕೋರಿ ಎಸ್‌ಪಿಗೆ ನೀಡಿರುವ ಮನವಿ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿನ ಪೊಲೀಸ್ ಲೈನ್‌ನಲ್ಲಿ ಇನ್ ಸ್ಪೆಕ್ಟರ್ ಆಗಿರುವ ಅಶೋಕ್ ಕುಮಾರ್ ಹೋಳಿ ರಜೆ ನೀಡುವಂತೆ ಎಸ್‌ಪಿ ಅಶೋಕ್ ಮೀನಾ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಇನ್ ಸ್ಪೆಕ್ಟರ್ ಅಶೋಕ್ ಕುಮಾರ್ ಅವರು, ತನಗೆ ವಿವಾಹವಾಗಿ 22 ವರ್ಷಗಳು ಆಗಿದೆ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಪತ್ನಿಯೊಂದಿಗೆ ಹೋಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ಬಹಳ ಕೋಪಗೊಂಡಿದ್ದಾಳೆ. ಈ ಬಾರಿಯ ಹೋಳಿ ಹಬ್ಬದಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಆದ್ದರಿಂದ ಹೋಳಿ ರಜೆಯ ಅವಶ್ಯಕತೆಯಿದೆ. ದಯವಿಟ್ಟು 10 ದಿನಗಳ ರಜೆ ನೀಡಿ ಎಂದು ಬರೆದುಕೊಂಡಿದ್ದಾರೆ.