ಹತ್ತು ವರ್ಷಗಳ ಕಾಲ ಒಂದಾದರಂತೆ ಒಂದು ಹೆರಿಗೆ: 28ನೇ ವಯಸ್ಸಿಗೆ 9 ಮಕ್ಕಳಿಗೆ ತಾಯಿಯಾದಳು
ನವದೆಹಲಿ: ಹಿಂದೆ ಮಕ್ಕಳಿರಲವ್ವಾ ಮನೆತುಂಬಾ ಎಂದು ಹೇಳುತ್ತಿದ್ದರೆ, ಈಗ ಕಡಿಮೆ ಮಕ್ಕಳಿರಲಿ ಎಂದು ಕುಟುಂಬ ಯೋಜನೆಯ ಮೊರೆ ಹೋಗುವವರೇ ಎಲ್ಲರೂ. ಆದರೆ ಇಲ್ಲೊಬ್ಬಳು ಕೇವಲ ಹತ್ತು ವರ್ಷಗಳಲ್ಲಿ ಒಂದಾದ ಮೇಲೊಂದರಂತೆ ಮಕ್ಕಳಿಗೆ ಜನ್ಮ ನೀಡಿ, ತನ್ನ 28ನೇ ವಯಸ್ಸಿಗೆ 9 ಮಕ್ಕಳನ್ನು ಹೊಂದುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾಳೆ.
ಲಾಸ್ ವೇಗಾಸ್‌ನ ಆ್ಯಂಡ್ರೆ ಡ್ಯೂಕ್ ಎಂಬಾತನ ಪತ್ನಿ ಕೋರ ಡ್ಯೂಕ್ ಎಂಬಾಕೆಯೇ ಈ ಮಹಾತಾಯಿ. ಇವರಿಬ್ಬರದ್ದೂ ಇದೀಗ 23 ವರ್ಷಗಳ ದಾಂಪತ್ಯ. ಅಂದಹಾಗೆ ಕೋರ ಡ್ಯೂಕ್ ಚೊಚ್ಚಲ ಹೆರಿಗೆಯಾಗಿದ್ದು 2001ರಲ್ಲಿ. ಈ ವೇಳೆ ಈಕೆಗೆ ಕೇವಲ 17 ವರ್ಷ. ಅದಾದ ಬಳಿಕ ಈಕೆಗೆ ಪ್ರತೀವರ್ಷವೂ ನಿರಂತರ ಹೆರಿಗೆ ಆಗಿದೆ. ಈಕೆಗೆ ಕೊನೆಯ ಹೆರಿಗೆಯಾದದ್ದು 2012ರಲ್ಲಿ ಅಂದರೆ 28ನೇ ವರ್ಷದಲ್ಲಿ. ಆ ಮೂಲಕ ಈಕೆ 9 ಮಕ್ಕಳ ತಾಯಿಯಾಗಿದ್ದಾಳೆ.
ಸದ್ಯ 39 ವರ್ಷದ ಕೋರ ಹಾಗೂ ಆಕೆಯ ಸಂಸಾರ ಲಾಸ್ ವೇಗಸ್‌ನಲ್ಲೇ ನೆಲೆಸಿದೆ. ಕೋರ ಹಾಗೂ ಆ್ಯಂಡ್ರೆ ಹೈಸ್ಕೂಲ್ ಹಂತದಲ್ಲೇ ಗೆಳೆಯರಾಗಿದ್ದರು. ನಾಟಕದ ತರಗತಿಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದರು. ಆ ಬಳಿಕ ಇಬ್ಬರೂ ಜೊತೆಯಾಗಿ ಬದುಕಲು ಆರಂಭಿಸಿದರು.
"ತಾಯ್ತನ ತನಗೆ ಸಹಜವಾಗಿಯೇ ಬಂದಿದೆ. ಆದರೆ ನನಗೆ ಹಲವಾರು ಸಮಸ್ಯೆಗಳು ಎದುರಾಗಿದ್ದು, ಪತಿಯ ಸಹಾಯದಿಂದ ಅವೆಲ್ಲವನ್ನೂ ಜೊತೆಯಾಗಿ ಎದುರಿಸಿದೆ" ಎಂದು ಕೋರಾ ಹೇಳಿಕೊಂಡಿದ್ದಾಳೆ. 9ನೇ ಮಗುವಿನ ಜನನದ ಬಳಿಕ ಮತ್ತೆ ಮಕ್ಕಳನ್ನು ಹೊಂದಲು ಇಷ್ಟವಿರದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿಯೂ ಕೋರ ತಿಳಿಸಿದ್ದಾಳೆ. ದುರಂತವೆಂದರೆ, ಈ ದಂಪತಿಗೆ 2004ರಲ್ಲಿ ಜನಿಸಿದ್ದ ಪುತ್ರಿ ಯೂನಾ ಸಾವಿಗೀಡಾದ್ದಾಳೆ. ಹುಟ್ಟಿದ ಒಂದು ವಾರದ ಬಳಿಕ ಈ ಮಗು ಸಡನ್ ಇನ್‌ಫ್ಯಾಂಟ್ ಡೆತ್ ಸಿಂಡ್ರೋಮ್‌ನಿಂದ ಸಾವಿಗೀಡಾಗಿತ್ತು.