30ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಉದ್ಯೋಗ ತೊರೆದು ಸಮೋಸ ಮಾರಾಟಕ್ಕಿಳಿದ ದಂಪತಿ : ವಾರ್ಷಿಕ 45 ಕೋಟಿ ವಹಿವಾಟು
ಬೆಂಗಳೂರು: ಲಕ್ಷಾಂತರ ರೂ. ಸಂಬಳವಿರುವ ಐಟಿ ಉದ್ಯೋಗವನ್ನು ತೊರೆದು ಸ್ಟಾರ್ಟ್ ಅಪ್ ಆರಂಭಿಸಿರುವ ದಂಪತಿ ಈಗ ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಮೋಸ ತಯಾರಿಸಿ ಮಾರಾಟ ಮಾಡುತ್ತಿರುವ ಈ ದಂಪತಿ ಈಗ ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಿದ್ದಾರೆ. ಸ್ವಂತ ಉದ್ಯಮ ಸ್ಥಾಪಿಸಿ ಇಂದು ಹಿಂದಿಗಿಂತಲೂ ಅಧಿಕ ಆದಾಯ ಗಳಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಸಮೋಸ ಸಿಂಗ್ ಎಂಬ ಈ ಉದ್ಯಮ ಆರಂಭಿಸಿದವರು ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್. ಇಬ್ಬರೂ ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕೈ ತುಂಬಾ ವೇತನ ಗಳಿಸುತ್ತಿದ್ದರು. ಇದೀಗ ಇವರು ಲಕ್ಷಾಂತರ ರೂ. ಸಂಬಳದ ಉದ್ಯೋಗ ತೊರೆದು ಸಮೋಸ ಮಾರುವ ಉದ್ಯಮ ಪ್ರಾರಂಭಿಸಿದರು. ಇದೀಗ ಇವರು ಹಿಂದಿನ ಅಧಿಕ ಪ್ಯಾಕೇಜ್ ನ ಉದ್ಯೋಗಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್ ಹರಿಯಾಣದಲ್ಲಿ ಬಿ.ಟೆಕ್ ಓದುವ ಸಂದರ್ಭದಲ್ಲಿ ಪರಿಚಿತರಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ಬಯೋಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. 2015ರಲ್ಲಿ ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸುವ ಸಂದರ್ಭ ಅವರು ಬಯೋಕಾನ್ ನಲ್ಲಿ ಪ್ರಧಾನ ಇಂಜಿನಿಯರ್ ಆಗಿದ್ದರು. ನಿಧಿ ಸಿಂಗ್ ಕಾರ್ಪೋರೇಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅವರ ವಾರ್ಷಿಕ ಪ್ಯಾಕೇಜ್ 30ಲಕ್ಷ ರೂ. ಆಗಿತ್ತು. 2015ರಲ್ಲಿ ಇವರಿಬ್ಬರೂ ಉದ್ಯೋಗ ತ್ಯಜಿಸಿದ ಕುಟುಂಬದ ಸಹಾಯ ಪಡೆಯದೆ ತಮ್ಮ ಉಳಿತಾಯದ ಹಣದಲ್ಲೇ ಉದ್ಯಮ ಪ್ರಾರಂಭಿಸಿದರು.
ಸಮೋಸಕ್ಕೆ ಬೇಡಿಕೆ ಹೆಚ್ಚಿದಂತೆ ಅದರ ತಯಾರಿಗೆ ದೊಡ್ಡ ಸ್ಥಳದ ಅಗತ್ಯ ಎದುರಾಯಿತು. ಅದರ ಖರೀದಿಗೆ ತಮ್ಮ ಕನಸಿನ ಅಪಾರ್ಟ್ ಮೆಂಟ್ ಅನ್ನು 80ಲಕ್ಷ ರೂ.ಗೆ ಮಾರಾಟ ಮಾಡಿದರು. ಮನೆ ಮಾರಾಟ ಮಾಡಿದ ಹಣದಿಂದ ಫ್ಯಾಕ್ಟರಿಯೊಂದನ್ನು ಬಾಡಿಗೆಗೆ ಪಡೆದರು. ಅವರು ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಾರೆ. 45 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ದಂಪತಿ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಸದ್ಯ ಯೋಜನೆ ರೂಪಿಸುತ್ತಿದ್ದಾರೆ.